ನವದೆಹಲಿ:ದೇಶದಲ್ಲಿ ಹೆಚ್ಚುತ್ತಿರುವ ಅಕ್ರಮ ಆನ್ಲೈನ್ ಜೂಜಾಟ ಮತ್ತು ಹಣಕಾಸು ವಂಚನೆಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಬೃಹತ್ ಕಾರ್ಯಾಚರಣೆ ನಡೆಸಿದೆ. ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸುಮಾರು 300ಕ್ಕೂ ಹೆಚ್ಚು ಅಕ್ರಮ ಜೂಜಾಟ (Gambling) ಮತ್ತು ಬೆಟ್ಟಿಂಗ್ (Betting) ವೆಬ್ಸೈಟ್ಗಳು ಹಾಗೂ ಮೊಬೈಲ್ ಆ್ಯಪ್ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬ್ಲಾಕ್ ಮಾಡಿದೆ.
ಈ ಸೈಟ್ಗಳು ಮತ್ತು ಆ್ಯಪ್ಗಳು ಬಳಕೆದಾರರನ್ನು ಆಕರ್ಷಿಸಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿ, ನಂತರ ವಂಚಿಸುತ್ತಿವೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಪೈಕಿ ಹಲವು ಆ್ಯಪ್ಗಳು ವಿದೇಶಿ ಮೂಲದವಾಗಿದ್ದು (ವಿಶೇಷವಾಗಿ ಚೀನಾ ಮೂಲದವು), ಇವುಗಳ ಮೂಲಕ ಹಣವನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸಲಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ಅಕ್ರಮ ಪ್ಲಾಟ್ಫಾರ್ಮ್ಗಳು ಭಾರತೀಯ ನಾಗರಿಕರ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕಿಂಗ್ ವಿವರಗಳನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.








