ಮಧ್ಯ ಮ್ಯಾನ್ಮಾರ್ನ ಬೌದ್ಧ ಮಠವೊಂದರ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ಕು ಮಕ್ಕಳು ಸೇರಿದಂತೆ ಕನಿಷ್ಠ 23 ನಾಗರಿಕರು ಸಾವನ್ನಪ್ಪಿದ್ದಾರೆ.
ದೇಶದ ಎರಡನೇ ಅತಿದೊಡ್ಡ ನಗರವಾದ ಮಾಂಡಲೆಯಿಂದ ವಾಯುವ್ಯಕ್ಕೆ 35 ಕಿಲೋಮೀಟರ್ ದೂರದಲ್ಲಿರುವ ಪ್ರತಿರೋಧದ ಭದ್ರಕೋಟೆಯಾದ ಸಾಗಿಂಗ್ ಟೌನ್ಶಿಪ್ನ ಲಿನ್ ತಾ ಲು ಗ್ರಾಮದಲ್ಲಿ ಗುರುವಾರ ಮುಂಜಾನೆ ಈ ಮಾರಣಾಂತಿಕ ದಾಳಿ ನಡೆದಿದೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯಿಂದ 150 ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿರುವ ಮಠವನ್ನು ಗುರಿಯಾಗಿಸಿಕೊಂಡು ಮುಂಜಾನೆ 1 ಗಂಟೆ ಸುಮಾರಿಗೆ ದಾಳಿ ನಡೆದಿದೆ ಎಂದು ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿ ಮಾಡಿದೆ.
“ನಾಲ್ಕು ಮಕ್ಕಳು ಸೇರಿದಂತೆ 23 ನಾಗರಿಕರು ಸಾವನ್ನಪ್ಪಿದ್ದಾರೆ. ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 10 ಮಂದಿಯ ಸ್ಥಿತಿ ಗಂಭೀರವಾಗಿದೆ” ಎಂದು ಸ್ಥಳೀಯ ಪ್ರತಿರೋಧ ಗುಂಪಿನ ಹೆಸರು ಹೇಳಲಿಚ್ಛಿಸದ ಸದಸ್ಯರೊಬ್ಬರು ಎಪಿಗೆ ತಿಳಿಸಿದ್ದಾರೆ