ಥೈಲ್ಯಾಂಡ್ : ಥೈಲಾಂಡ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪ್ರಯಾಣಿಕರ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 18 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಥೈಲ್ಯಾಂಡ್‌ನ ಪ್ರಾಚಿನ್ ಬುರಿಯಲ್ಲಿ ಪ್ರವಾಸಿ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ಈ ಘಟನೆಯಲ್ಲಿ 18 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು, ಘಟನೆ ನಡೆದ ಪ್ರದೇಶವು ಇಳಿಜಾರಿನ ರಸ್ತೆಯಾಗಿದ್ದು, ಆ ಸಮಯದಲ್ಲಿ ಬಸ್ಸಿನ ಬ್ರೇಕ್ ವಿಫಲವಾಗಿತ್ತು. ಇದಾದ ನಂತರ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿ 18 ಜನರು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಾವನ್ನಪ್ಪಿದವರೆಲ್ಲರೂ ಅಧ್ಯಯನ ಪ್ರವಾಸಕ್ಕೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ಪೂರ್ವಕ್ಕೆ 155 ಕಿ.ಮೀ ದೂರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಪ್ರಕಾರ, ರಕ್ಷಣಾ ಮತ್ತು ವೈದ್ಯಕೀಯ ತಂಡಗಳು ಸ್ಥಳದಲ್ಲಿವೆ.
ಥೈಲ್ಯಾಂಡ್ ಪ್ರಧಾನಿ ಪಟೊಂಗ್ಟಾರ್ನ್ ಶಿನವಾತ್ರ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಬಲಿಪಶುಗಳ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಇದರೊಂದಿಗೆ ಅವರು ಈ ಅಪಘಾತದ ತನಿಖೆಯ ಬಗ್ಗೆಯೂ ಮಾತನಾಡಿದರು. ಅವರು X ನಲ್ಲಿ ಪೋಸ್ಟ್ ಮಾಡಿ, ವಾಹನ ಸುರಕ್ಷತೆಯನ್ನು ಉಲ್ಲಂಘಿಸಿರುವುದು ಕಂಡುಬಂದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ವಾಹನ ತಪಾಸಣೆಯನ್ನು ಸುರಕ್ಷಿತ ರೀತಿಯಲ್ಲಿ ಮಾಡಬೇಕು ಮತ್ತು ವಾಹನಗಳು ಮಾನದಂಡಗಳನ್ನು ಪಾಲಿಸಬೇಕು ಎಂದು ಪಿಎಂ ಶಿನವತ್ರ ಹೇಳಿದರು.