ಉತ್ತರ ಕನ್ನಡ/ರಾಯಚೂರು : ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತಕ್ಕೆ 14 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಹಾಗೂ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ತರಕಾರಿ ತುಮಬಿದ ಲಾರಿ ಪಲ್ಟಿಯಾಗಿ 10 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 63ರ ಗುಳ್ಳಾಪುರ ಘಟ್ಟ ಭಾಗದಲ್ಲಿ ನಡೆದಿದೆ. ರಾಯಚೂರಿನಲ್ಲಿ ಟೈರ್ ಸ್ಪೋಟಗೊಂಡು ವಾಹನ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.
ತರಕಾರಿ ತುಂಬಿದ ಲಾರಿ ಪಲ್ಟಿಯಾಗಿ 10 ಮಂದಿ ಸಾವು
ಗುಳ್ಳಾಪುರ ಗ್ರಾಮದಲ್ಲಿ ತರಕಾರಿ ತುಂಬಿದ ಲಾರಿ ಪಲ್ಟಿಯಾಗಿ 10 ಮಂದಿ ಸಾವನ್ನಪ್ಪಿದ್ದು, 15 ಕ್ಕೂ ಹೆಚ್ಚು ಮಂದಿ ಗಾಯ ಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತರಕಾರಿ ತುಂಬಿದ ಲಾರಿ ಸವಣೂರಿನಿಂದ ಕುಮಟಾಗೆ ತೆರಳುತ್ತಿತ್ತು. ಈ ವೇಳೆ ಗುಳ್ಳಾಪುರ ಗ್ರಾಮದ ಬಳಿ ಲಾರಿ ಪಲ್ಟಿಯಾಗಿದೆ. ಲಾರಿಯಲ್ಲಿ 25 ಜನರು ಪ್ರಯಾಣಿಸುತ್ತಿದ್ದರು. ಈ ಪೈಕಿ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತರು ಹಾವೇರಿ ಜಿಲ್ಲೆಯ ಸವಣೂರು ಮೂಲದವರೆಂಬ ಮಾಹಿತಿ ಲಭ್ಯವಾಗಿದೆ.
ರಾಯಚೂರಿನಲ್ಲಿ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಸಾವು
ಕ್ರೂಷರ್ ವಾಹನದ ಟೈರ್ ಬ್ಲಾಸ್ಟ್ ಆಗಿ ಚಾಲಕ ಸೇರಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹರಗಿನಮರ ಕ್ಯಾಂಪ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕ್ರೂಷರ್‌ವಾಹನದ ಟೈರ್‌ಬ್ಲಾಸ್ಟ್ ಆಗಿ ಚಾಲಕ ಸೇರಿ ಮಂತ್ರಾಲಯದ ಮಠದ ಸಾಂಸ್ಕೃತಿಕ ವಿದ್ಯಾಪೀಠದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ವಾಹನ ಚಾಲಕ ಶಿವು, ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳಾದ ಹೈವಧನ ಕಟ್ಟಿ, ಸುಜಯೀಂದ್ರ, ಅಭಿಲಾಶ ಮೃತ ವಿದ್ಯಾರ್ಥಿಗಳು, ವಿದ್ಯಾರ್ಥಿ ಜಯಸಿಂಹ ಸ್ಥಿತಿ ಚಿಂತಾಜನಕವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.