ಕಲಬುರಗಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ಒಂದು ದಿನದ ನಂತರ, ಕರ್ನಾಟಕದ ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣದಲ್ಲಿ ಭಗವಾನ್ ರಾಮ ವಿಗ್ರಹ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಜಗಳದ ನಂತರ ಕರ್ನಾಟಕ ಸರ್ಕಾರ ನಿಷೇಧಾಜ್ಞೆ ವಿಧಿಸಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜನವರಿ 25 ರಂದು ಬೆಳಿಗ್ಗೆ 6 ಗಂಟೆಯವರೆಗೆ ಸಿಆರ್ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸೋಮವಾರ, ಮೆರವಣಿಗೆಯ ಸಮಯದಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟದ ಘಟನೆಯ ನಂತರ ಜಗಳ ನಡೆಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು, ಪೊಲೀಸರು ಮಧ್ಯಪ್ರವೇಶಿಸಿ ಜನಸಮೂಹವನ್ನು ಚದುರಿಸಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಜನವರಿ 25ರ ಬೆಳಿಗ್ಗೆ 6ರ ವರೆಗೆ ಪಟ್ಟಣದಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಚಿತ್ತಾಪುರ ತಹಶೀಲ್ದಾರ್ ಸೈಯದ್ ಷಾಷಾವಲಿ ಅವರು ಸ್ಥಳೀಯ ಪಿಎಸ್ಐ ತಿರುಮಲೇಶ ಕುಂಬಾರ ಅವರ ಮನವಿ ಮೇರೆಗೆ ಜನವರಿ 25ರ ಬೆಳಿಗ್ಗೆ 6ರ ವರೆಗೆ ಸೆಕ್ಷನ್ 144 ಜಾರಿ ಮಾಡಿ ಸಾರ್ವಜನಿಕರ ಹಾಗೂ ಅಂಗಡಿ ಮುಂಗಟ್ಟುಗಳ ವ್ಯಾಪಾರ ವಹಿವಾಟು ಗಳಿಗೆ ನಿರ್ಬಂಧ ವಿಧಿಸಲಾಗಿದೆ.