ಕಲಬುರಗಿ : ರಾಜ್ಯದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ವೇಗವಾಗಿ ತೆರಳುತ್ತಿದ್ದ ಕಾರೊಂದು ರಸ್ತೆಯಲ್ಲಿ ಏಕಾಏಕಿ ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ ಅಪಘಾತಕ್ಕೀಡಾಗಿ 2 ವರ್ಷದ ಮಗು ಸಹಿತ ಮೂವರು ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ಕಲಬುರ್ಗಿ ಜಿಲ್ಲೆಯ ಅಫ್ಜಲ್ ಪುರ ತಾಲೂಕಿನ ಗೊಬ್ಬುರು(ಕೆ) ಗ್ರಾಮದ ಬಳಿ ನಡೆದಿದೆ.
ಮೃತರನ್ನು ಕಲಬುರಗಿ ನಗರದ ಮಿಲ್ಲತ್ ನಗರದ ನಿವಾಸಿಗಳಾದ ಆಯಿಶ(70), ಅಜೇರಾ (30) ಮತ್ತು ಮಗು ಜೈನಬ್ (2) ಎಂದು ತಿಳಿದುಬಂದಿದೆ.ಇವರು ಮಿಲ್ಲತ್ ನಗರದಿಂದ ಮಹಾರಾಷ್ಟ್ರ ಗಡಿಯಲ್ಲಿರೋ ಹೈದ್ರಾ ದರ್ಗಾಕ್ಕೆ ಸಂಬಂಧಿಕರ ಮಗುವಿನ ಜಾವಳ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಟವೇರಾ ವಾಹನದಲ್ಲಿ ತೆರಳುತ್ತಿದ್ದರು.
ಇವರಿದ್ದ ವಾಹನ ಗೊಬ್ಬುರು(ಕೆ) ಗ್ರಾಮದ ಬಳಿ ತಲುಪಿದಾಗ ರಸ್ತೆಯಲ್ಲಿ ನಾಯಿಯೊಂದು ಏಕಾಏಕಿ ಕಾರಿಗೆ ಅಡ್ಡ ಬಂದಿದೆ. ಈ ಸಂದರ್ಭದಲ್ಲಿ ಅದನ್ನು ರಕ್ಷಿಸುವ ಯತ್ನದಲ್ಲಿ ಕಾರು ಉರುಳಿಬಿದ್ದು ಈ ಅಪಘಾತ ಸಂಭವಿಸಿದೆ. ಈ ಕುರಿತು ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.