ಬೆಂಗಳೂರು: ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯನ್ನು ತಗ್ಗಿಸಲು ಆಹಾರ ಇಲಾಖೆ, ಏಕಾಏಕಿ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುತ್ತಿರುವುದು ಮತ್ತು ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆ ಮಾಡುತ್ತಿರುವ ಬಗ್ಗೆ ಗುರುತರ ಆರೋಪಗಳು ಕೇಳಿಬಂದಿವೆ.
2023-24ರಲ್ಲಿ 74,342, 2024-25ರಲ್ಲಿ 16,719 ಮತ್ತು 2025ರ ಆಗಸ್ಟ್‌ವರೆಗೆ 10,810 ಸೇರಿ ಒಟ್ಟು 1,01,871 ಬಿಪಿಎಲ್‌ಗಳು ರದ್ದಾಗಿವೆ. ಅಲ್ಲದೆ, ಕಳೆದ ಮೂರು ವರ್ಷಗಳಿಂದ ಇಲಾಖೆಯ ಅಧಿಕಾರಿಗಳು, ಸರ್ಕಾರದ ಮಾನದಂಡವನ್ನೇ ನೆಪವಾಗಿಸಿ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸುತ್ತಿದ್ದಾರೆ.
ಪ್ರಸ್ತುತ 7,76,206 ಬಿಪಿಎಲ್ ಚೀಟಿಗಳನ್ನು ‘ಶಂಕಾಸ್ಪದ’ ಪಟ್ಟಿಗೆ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇವುಗಳು ಸಹ ರದ್ದಾಗುವ ಸಾಧ್ಯತೆ ಇದೆ. ಬಿಪಿಎಲ್‌ನಿಂದ ಎಪಿಎಲ್‌ಗೆ ಈಗಾಗಲೇ ಪರಿವರ್ತನೆಯಾಗಿರುವ ಲಕ್ಷಾಂತರ ಲಾನುಭವಿಗಳ ಪೈಕಿ ಶೇ.75 ನೈಜ ಫಲಾನುಭವಿಗಳ ಹೆಸರನ್ನೇ ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ.
ನೈಜ ಕಾರ್ಡ್‌ಗಳು ರದ್ದಾಗಿದ್ದರೆ ಆಯಾ ತಾಲೂಕಿನ ಸಂಬಂಧಪಟ್ಟ ತಹಶೀಲ್ದಾರ್‌ಗೆ 45 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದರೆ ಬಿಪಿಎಲ್ ಚೀಟಿ ಮರುಸ್ಥಾಪನೆ ಮಾಡುವುದಾಗಿ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಸಾಕಷ್ಟು ಬಾರಿ ಹೇಳಿದ್ದಾರೆ. ಆದರೆ, ಇದುವರೆಗೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಕಾರ್ಡ್ ರದ್ದಾಗಿರುವ ಫಲಾನುಭವಿಗಳು, ಈ ಬಗ್ಗೆ ತಹಶೀಲ್ದಾರ್ ಅಥವಾ ಇಲಾಖೆಯ ಉಪ ಆಯುಕ್ತರ ಕಚೇರಿಗಳಲ್ಲಿ ವಿಚಾರಿಸಿದರೆ ಗೊಂದಲಕರ ಉತ್ತರ ನೀಡುತ್ತಿದ್ದಾರೆ. ಇದರಿಂದಾಗಿ ಕಾರ್ಡ್‌ದಾರರು ಕಂಗಾಲಾಗಿದ್ದಾರೆ. ರಾಜ್ಯಾದ್ಯಂತ ಈವರೆಗೆ ಯಾವುದೇ ಬಿಪಿಎಲ್ ಚೀಟಿಗಳನ್ನು ಮರು ಸ್ಥಾಪಿಸಿಲ್ಲ.
ಕೇಂದ್ರದತ್ತ ರಾಜ್ಯ ಬೊಟ್ಟು:
ಕಾರ್ಡ್‌ಗಳ ರದ್ದು ವಿಚಾರದಲ್ಲಿ ರಾಜ್ಯ ಸರ್ಕಾರ, ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚು ವರಮಾನ, ಮನೆಯಲ್ಲಿ ಕಾರು ಹೊಂದಿರುವವರು, ಆದಾಯ ತೆರಿಗೆ, ಜಿಎಸ್‌ಟಿ ಪಾವತಿಸುವವರು, ಏಳೂವರೆ ಎಕರೆ ಒಣ ಅಥವಾ ನೀರಾವರಿ ಭೂಮಿ ಇರುವವರು ಹಾಗೂ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವವರು ಸೇರಿ ಇತರ ಮಾನದಂಡ ಉಲ್ಲಂಸಿ ಪಡೆದಿರುವ ಕಾರ್ಡ್‌ಗಳನ್ನು ಕೇಂದ್ರ ಸರ್ಕಾರ, ‘ಶಂಕಾಸ್ಪದ’ ಎಂದು ಗುರುತಿಸಿ ಪಟ್ಟಿಯನ್ನು ನಮಗೆ ಕಳುಹಿಸಿದೆ. ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಈ ವೇಳೆ ಮಾನದಂಡ ಉಲ್ಲಂಸಿದ ಕಾರ್ಡ್‌ಗಳನ್ನು ರದ್ದುಪಡಿಸಲಾಗುತ್ತಿದೆ.
ಇನ್ನೂ ಹಲವು ಕಾರ್ಡ್ ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತಿಸಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಆದರೆ, ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ತಗ್ಗಿಸಲು ಸರ್ಕಾರವೇ ಬಿಪಿಎಲ್ ಚೀಟಿ ರದ್ದುಪಡಿಸುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಒಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಕಿತ್ತಾಟದಲ್ಲಿ ನೈಜ ಕಾರ್ಡ್‌ಗಳು ರದ್ದಾಗುತ್ತಿವೆ.
ಮೊದಲು ನೋಟಿಸ್ ನೀಡಿ:
ಒಬ್ಬರ ತಪ್ಪಿನಿಂದ ಬಿಪಿಎಲ್ ರದ್ದು ಅಥವಾ ಎಪಿಎಲ್‌ಗೆ ಪರಿವರ್ತನೆ ಮಾಡುತ್ತಿರುವ ಇಲಾಖೆಯ ಅಧಿಕಾರಿಗಳು, ಕಾರ್ಡ್‌ದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಪಿಎಲ್ ಹೊಂದಿರುವ ಕುಟುಂಬದ ಸದಸ್ಯರ ಪೈಕಿ ಯಾರಾದರೂ ಒಬ್ಬರು ಜಿಎಸ್‌ಟಿ, ಆದಾಯ ತೆರಿಗೆ ಪಾವತಿಸಿದರೆ,ಆ ಕುಟುಂಬದ ಕಾರ್ಡ್‌ನ್ನೇ ರದ್ದು ಅಥವಾ ಎಪಿಎಲ್‌ಗೆ ಪರಿವರ್ತಿಸಲಾಗುತ್ತಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಲಕ್ಷಾಂತರ ಕಾರ್ಡ್‌ದಾರರು, ಕಾರ್ಡ್‌ನಲ್ಲಿ ಯಾರಾದರೂ ಜಿಎಸ್‌ಟಿ, ಆದಾಯ ತೆರಿಗೆ ಪಾವತಿ, ಕಾರು ಹೊಂದಿರುವವರಿಗೆ ಮೊದಲು ನೋಟಿಸ್ ನೀಡಬೇಕು. ನೋಟಿಸ್ ನೀಡಿದ ಬಳಿಕವಷ್ಟೇ ಸಮಾಜಾಯಿಷಿ ಪಡೆದು ಕಾರ್ಡ್‌ನಲ್ಲಿರುವ ಅವರ ಹೆಸರುನ್ನು ಡಿಲೀಟ್ ಮಾಡಬೇಕು. ಏಕಾಏಕಿ ಕಾರ್ಡ್ ರದ್ದುಪಡಿಸುವುದು ಸರಿಯಲ್ಲ ಎಂದು ಕಾರ್ಡ್‌ದಾರರು ಒತ್ತಾಯಿಸಿದ್ದಾರೆ. ಬಿಪಿಎಲ್ ರದ್ದಾಗಿರುವ ಫಲಾನುಭವಿಗಳು, ಈಗಾಗಲೇ ಪಿಂಚಣಿ, ಗೃಹಲಕ್ಷ್ಮಿ ಮತ್ತು ಚಿಕಿತ್ಸೆ ಸೇರಿ ಸರ್ಕಾರದ ಇತರ ಸೌಲಭ್ಯ ಕಳೆದುಕೊಂಡಿದ್ದಾರೆ.
ಆಹಾರ ಇಲಾಖೆಯ ಎಡವಟ್ಟು:
* ಮೂಲದಲ್ಲಿ ತೆರಿಗೆ ಕಡಿತವಾಗಿರುವ(ಟಿಡಿಎಸ್) ಲಾನುಭವಿಗಳ ಕಾರ್ಡ್ ಡಿಲೀಟ್
* ಕಾರ್ಡ್ ಮರುಸ್ಥಾಪಿಸಲು ಪ್ರತಿನಿತ್ಯ ಅಹಾರ ಕಚೇರಿಗಳಿಗೆ ಅಲೆದಾಟ
* ಸಾಕಷ್ಟು ಬಡ, ಮಧ್ಯಮ ವರ್ಗದವರ ಬಿಪಿಎಲ್ ಚೀಟಿ ರದ್ದು
* ಕಾರ್ಡ್ ರದ್ದಾಗಿರುವ ಕುರಿತು ಕೆಲವರಿಗೆ ಮಾಹಿತಿಯೇ ಇಲ್ಲ
* ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಸಿಗದೆ ಬರಿಗೈಲಿ ವಾಪಸ್ಸು
* ಹಳೆಯ ಮಾನದಂಡ ಪರಿಸ್ಕರಿಸುವಂತೆ ಹೆಚ್ಚಿದ ಕೂಗು
ಸಚಿವ ಕೆ.ಹೆಚ್ ಮುನಿಯಪ್ಪ ಹೇಳೋದೇನು.?
ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ತಗ್ಗಿಸಲು ಪಡಿತರ ಕಾರ್ಡ್‌ಗಳನ್ನು ರದ್ದುಪಡಿಸುತ್ತಿಲ್ಲ. ಹಿಂದೆ ಮಾನದಂಡ ಉಲ್ಲಂಘಿಸಿ ಪಡೆದಿರುವ ಬಿಪಿಎಲ್ ಚೀಟಿಗಳನ್ನು ರದ್ದು ಅಥವಾ ಎಪಿಎಲ್‌ಗೆ ಪರಿವರ್ತಿಸಲಾಗುತ್ತಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಇದನ್ನು ನಿಲ್ಲಿಸುವುದಿಲ್ಲ ಎಂಬುದಾಗಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಒಟ್ಟಾರೆಯಾಗಿ ರಾಜ್ಯ ಸರ್ಕಾರವು ಗ್ಯಾರಂಟಿ ಹೊರೆಯಿಂದ ಪಾರಾಗಲು ಪರ್ಯಾಯ ಮಾರ್ಗವಾಗಿ ಮಾನದಂಡದ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ರದ್ದುಪಡಿಸಿರೋದಂತ ನಿಜಕ್ಕೂ ಫಲಾನುಭವಿಗಳಿಗೆ, ಅರ್ಹರಿಗೆ ಸರ್ಕಾರ ಶಾಕ್ ಕೊಟ್ಟಂತೆ ಆಗಿದೆ. ಕೇವಲ ಬಾಯಿ ಮಾತಿನಲ್ಲಿ ಎನ್ನುವಂತೆ ಅರ್ಜಿ ಸಲ್ಲಿಸಿ ಎಪಿಎಲ್ ಕಾರ್ಡಾ ಗೆ ವರ್ಗಾಯಿಸಿದ್ದರೂ ಸರಿ ಮಾಡಿ ಕೊಡ್ತೀವಿ ಅನ್ನೋದು ಸಚಿವರು, ಸರ್ಕಾರದ ಮಟ್ಟದ ಮಾತು. ಇದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಆದೇಶದ ರೂಪದಲ್ಲಿ ತಲುಪದೇ ಇರೋದು ವಿಷಾದಕರ. ಇತ್ತ ಸರ್ಕಾರ ಗಮನಿಸಿ, ಅರ್ಹರ ಬಿಪಿಎಲ್ ಕಾರ್ಡ್ ಮರು ಸ್ಥಾಪಿಸಿ ಕೊಡಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.








