ಬೆಂಗಳೂರು: ಇಂದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಕಾಯ್ದಿರಿಸಿದ್ದಂತ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆಯ ತೀರ್ಪು ಪ್ರಕಟಿಸಲಾಗಿತ್ತು. ಈ ತೀರ್ಪಿನಲ್ಲಿ ಬಾಕಿ ಪರೀಕ್ಷೆ ನಡೆಸೋದಕ್ಕೆ ಶಿಕ್ಷಣ ಇಲಾಖೆಗೆ ಅನುಮತಿ ನೀಡಿತ್ತು. ಹೀಗಾಗಿ ಮಾರ್ಚ್.25ರಿಂದ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ಪುನರಾರಂಭಿಸಲು ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಮಾಹಿತಿ ನೀಡಿದ್ದು, ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ನಡೆಸುವ ಸಂಬಂಧ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಎಸ್.ಎಲ್.ಪಿ ಸಂಖ್ಯೆ: 6256/2024, ಎಸ್.ಎಲ್.ಪಿ ಸಂಖ್ಯೆ: 6257/2024 ಮತ್ತು ಡೈರಿ ಸಂಖ್ಯೆ: 11192/2024 ದಾವಗಳನ್ನು ಹೂಡಿದ್ದು, ಸದರಿ ದಾವೆಗಳನ್ನು ವಿಚಾರಣೆ ನಡೆಸಿ, ಈ ಹಿಂದೆ ರಾಜ್ಯ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವು ಮೌಲ್ಯಾಂಕನವನ್ನು ಮುಂದುವರೆಸುವಂತೆ ನೀಡಿದ್ದ ಮಧ್ಯಂತರ ತೀರ್ಪನ್ನು ರದ್ದುಪಡಿಸಿರುತ್ತದೆ ಮತ್ತು ಪ್ರಕರಣವನ್ನು ರಾಜ್ಯ ಉಚ್ಛ ನ್ಯಾಯಾಲಯ ವಿಭಾಗೀಯ ಪೀಠಕ್ಕೆ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ದಿನಾಂಕ: 13-3-2024ರಿಂದ ನಡೆಯಬೇಕಾಗಿದ್ದ 5, 8 ಮತ್ತು 9ನೇ ತರಗತಿಗಳ SA-2 ಮೌಲ್ಯಾಂಕನವನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಶಾಲೆಗಳಿಗೆ ಸೂಚಿಸಲಾಗಿತ್ತು ಎಂದಿದ್ದಾರೆ.
ಮುಂದುವರೆದು, ರಾಜ್ಯ ಘನ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠವು ಸದರಿ ದಾವೆಯ ಪ್ರಕರಣವನ್ನು ವಿಚಾರಣೆ ನಡೆಸಿ ದಿನಾಂಕ: 22-3-2024ರಂದು ಅಂತಿಮ ತೀರ್ಪು ನೀಡಿದ್ದು, 5, 8 ಮತ್ತು 9ನೇ ತರಗತಿಗಳ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ಕಾರ್ಯವನ್ನು ಉಳಿದ ವಿಷಯಗಳಿಗೆ ಮುಂದುವರೆಸಲು ಸೂಚಿಸಿ ಆದೇಶಿಸಿರುತ್ತದೆ. ಅದರಂತೆ ಸದರಿ ಮೌಲ್ಯಾಂಕನ ಕಾರ್ಯವನ್ನು ವಿದ್ಯಾರ್ಥಿಗಳ ಅಭ್ಯಾಸದ ಹಿತದೃಷ್ಟಯಿಂದ ದಿನಾಂಕ: 25-3-2024ರಿಂದ ಪ್ರಾರಂಭಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ‘ಭ್ರೂಣ ಹತ್ಯೆ’ ಪ್ರಕರಣದ ತನಿಖೆಗೆ ‘ತನಿಖಾ ತಂಡ’ ರಚಿಸಿ ಆದೇಶ
‘ಲೋಕಸಭಾ ಚುನಾವಣೆ’ ಹೊತ್ತಲ್ಲೇ ಉಪಯುಕ್ತ ಮಾಹಿತಿ: ಹೀಗಿವೆ ‘ನೀತಿ ಸಂಹಿತೆ ಕಾಯ್ದೆ ಮತ್ತು ಕಲಂ’ಗಳು