ಶಿವಮೊಗ್ಗ : ರಾಜ್ಯ ಸರ್ಕಾರ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಮೂಲಕ ಬ್ರಾಹ್ಮಣ ಸಮುದಾಯಕ್ಕೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಸಮುದಾಯದವರು ಸೌಲಭ್ಯ ಪಡೆಯಲು ಹಿಂದೇಟು ಹಾಕಬಾರದು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ನಿರ್ದೇಶಕ ಪಿ.ಎಂ.ಮಾಲತೇಶ್ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಡಳಿ ಮೂಲಕ ಸರ್ಕಾರ ಜಾರಿಗೆ ತಂದಿರುವ ಯೋಜನೆ ಪಡೆಯಲು ಸಮುಚಿತ ಮಾರ್ಗದಲ್ಲಿ ಅರ್ಜಿ ಸಲ್ಲಿಸಲು ಮನವಿ ಮಾಡಿದರು.
ಪ್ರಮುಖವಾಗಿ ಪಿಯುಸಿಯಿಂದ ಪದವಿವರೆಗೆ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಸಾಂದೀಪಿನಿ ಶಿಷ್ಯ ವೇತನ ಯೋಜನೆಯಡಿ 15ಸಾವಿರ ರೂ. ನಿರ್ವಹಣಾ ವೆಚ್ಚ ನೀಡುತ್ತಿದ್ದು, ಅರ್ಹ ವಿಪ್ರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು ಅರ್ಜಿಯ ಜೊತೆಗೆ ಆಧಾರ್ ಕಾರ್ಡ್ ಮತ್ತು ಇಡಬ್ಲೂö್ಯಎಸ್ ಸಂಖ್ಯೆಯನ್ನು ನಮೂದಿಸಬೇಕು. ಮೆಡಿಕಲ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಹ ಧನ ಸಹಾಯ ನೀಡಲಾಗುತ್ತದೆ. ವಿದ್ಯಾರ್ಥಿಗಳು ದಿನಾಂಕ 30-11-2025ರೊಳಗೆ ಅರ್ಜಿಯನ್ನು ಸಲ್ಲಿಸಬಹುದು ಎಂದರು.
ಯೋಜನೆಯಡಿ 450 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು ಈತನಕ ಸುಮಾರು 6.50 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ. ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ಚಾಣಕ್ಯ ಆಡಳಿತ ತರಬೇತಿ ಯೋಜನೆಯಡಿಯಲ್ಲಿ ಯುಪಿಎಸ್‌ಸಿ, ಐಎಎಸ್ ಹಾಗೂ ರಾಜ್ಯ ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ಪೂರ್ವಭಾವಿ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ ಯುವಕ ಮತ್ತು ಯುವತಿಯರಿಗೆ ಸಣ್ಣ ಪ್ರಮಾಣದಲ್ಲಿ ಗೃಹ ಉದ್ಯಮ ನಡೆಸಲು ರೂ. 2ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ. ಸಾಲಕ್ಕೆ ಶೇ. 20 ಸಹಾಯಧನ ಇದ್ದು, ಶೇ. 4 ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಅ. 30ರೊಳಗೆ ನೇರ ಸಾಲ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ ಮಂಡಳಿಯಿಂದ ಬ್ರಾಹ್ಮಣ ಸಮುದಾಯದ ಶ್ರೇಯೋಭಿವೃದ್ದಿಗೆ ಪೂರಕವಾದ ಅನೇಕ ಯೋಜನೆಗಳ ಮನವಿ ನೀಡಲಾಗಿದೆ ಎಂದರು.
ಈ ಸುದ್ದಿಗೋಷ್ಟಿಯಲ್ಲಿ ಮಾ.ಸ.ನಂಜುಂಡಸ್ವಾಮಿ, ಚೂಡಾಮಣಿ ರಾಮಚಂದ್ರ, ನಾರಾಯಣಮೂರ್ತಿ ಕಾನುಗೋಡು, ಐ.ವಿ.ಹೆಗಡೆ, ನವೀನ್ ಜೋಯ್ಸ್, ಬದರಿನಾಥ್, ವಿನಾಯಕ ಜೋಯ್ಸ್, ಗೋಪಿ ದೀಕ್ಷಿತ್, ವೆಂಕಟೇಶ್, ಆರ್.ಎಸ್.ಹೆಗಡೆ, ನೇತ್ರಾ ಉಡುಪ, ವಿನೋದಾ, ಪುಷ್ಪ, ನಿರ್ಮಲಾ, ವೆಂಕಟೇಶ್ ಇನ್ನಿತರರು ಹಾಜರಿದ್ದರು.