ಬೆಳಗಾವಿ ಸುವರ್ಣಸೌಧ: ಬಿಎಂಟಿಸಿಗೆ ಕೇಂದ್ರ ಸರ್ಕಾರದ PM e- DRIVE ಯೋಜನೆಯಡಿ 4,500 ವಿದ್ಯುತ್ ಚಾಲಿತ ಬಸ್‍ಗಳನ್ನು ಜಿಸಿಸಿ ಮಾದರಿಯಲ್ಲಿ ಒದಗಿಸಲು ಮಂಜೂರಾತಿ ನೀಡಲಾಗಿದ್ದು, ಟೆಂಡರ್ ಜಾರಿಯಲ್ಲಿದೆ ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್. ಎಸ್. ಗೋಪಿನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರ ಉತ್ತರಿಸಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 25 ಕಿ.ಮೀ.ವರೆಗೆ ಕಾರ್ಯಾಚರಣೆ ವ್ಯಾಪ್ತಿಯನ್ನು ಹೊಂದಿದ್ದು, ಬೆಂಗಳೂರು ನಗರ ಹಾಗೂ ಹೊರ ವಲಯದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುಲಭ, ಸುರಕ್ಷಿತ ಸಾರಿಗೆ ಸೇವೆಯನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ ಎಂದಿದ್ದಾರೆ.
ಪ್ರತಿದಿನ ಹವಾನಿಯಂತ್ರಿತ ಸಾರಿಗೆಗಳನ್ನು ಒಳಗೊಂಡಂತೆ 1,817 ಮಾರ್ಗಗಳಲ್ಲಿ 6,274 ಅನುಸೂಚಿಗಳನ್ನು 65,934 ಸುತ್ತುವಳಿಗಳೊಂದಿಗೆ 13 ಲಕ್ಷ ಕಿ.ಮೀ.ಗಳಲ್ಲಿ ಬೆಂಗಳೂರು ನಗರ ಹಾಗೂ ಹೊರವಲಯದ ಪ್ರಯಾಣಿಕರ ದಟ್ಟಣೆ / ಅವಶ್ಯಕತೆಗನುಗುಣವಾಗಿ ಕಾರ್ಯಾಚರಣೆ ಮಾಡುತ್ತಿದ್ದು, ಸರಾಸರಿ 44 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆಗಳಲ್ಲಿ ಪ್ರಯಾಣಿಸುತ್ತಿದ್ದು, ಸಂಸ್ಥೆಯಲ್ಲಿ ನವೆಂಬರ್-2025ರ ಅಂತ್ಯಕ್ಕೆ 7051 ಬಸ್ಸುಗಳು ಕಾರ್ಯಾಚರಣೆಯಲ್ಲಿವೆ ಎಂದು ಹೇಳಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸಾರಿಗೇತರ ಆದಾಯವನ್ನು ಕ್ರೋಢಿಕರಿಸಲು ಬಸ್ಸುಗಳ ಮೇಲೆ ಜಾಹೀರಾತು ಪ್ರದರ್ಶಿಸಲು ಪ್ರೆಕ್ಯೂರ್‌ಮೆಂಟ್ ಮೂಲಕ ಟೆಂಡರ್ ಕರೆದು ಆಸಕ್ತ ವ್ಯಕ್ತಿ/ಏಜೆನ್ಸಿ/ಕಂಪನಿಗಳಿಗೆ ನಿಗದಿತ ಅವಧಿಗೆ ಹಾಗೂ ಇತರೆ ನಿಬಂಧನೆಗಳಿಗೆ ಒಳಪಟ್ಟು ಪರವಾನಗಿ ನೀಡುವ ಜಾಹೀರಾತು ಪದ್ಧತಿ ಜಾರಿಯಲ್ಲಿರುತ್ತದೆ ತಿಳಿಸಿದ್ದಾರೆ.
ಪರವಾನಗಿ ಶುಲ್ಕದ ಜೊತೆಗೆ ಜಾಹೀರಾತು ಪ್ರದರ್ಶಿಸಲಾಗುವ ಪ್ರತಿ ಬಸ್ಸುಗಳಿಗೆ ಅನ್ವಯವಾಗುವ ಇತರೆ ಶುಲ್ಕಗಳನ್ನು ಸಹ ಪಾವತಿಸಬೇಕಾಗಿರುತ್ತದೆ. ಸಾರಿಗೆ ನಿಗಮಗಳಿಗೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಒಟ್ಟು 650 ಬಸ್ಸುಗಳನ್ನು ಖರೀದಿಸುವಂತೆ ಆರ್ಥಿಕ ಇಲಾಖೆಯು ಸೂಚಿಸಿದ್ದು, ಅದರಂತೆ ಕ.ರಾ.ರ.ಸಾ.ನಿಗಮಕ್ಕೆ ಅವಶ್ಯವಿರುವ 500 ಡೀಸೆಲ್ ಮಾದರಿಯ ಬಸ್ಸುಗಳನ್ನು ಹಾಗೂ 144 ನಗರ ಸಾರಿಗೆ ಮಾದರಿ ವಾಹನಗಳನ್ನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಸಾಲಿನಲ್ಲಿ ಇಲ್ಲಿಯವರೆಗೆ 5 ವೋಲ್ವೊ ಮಲ್ಟಿ ಆಕ್ಸಲ್ ಸೀಟರ್ ಹಾಗೂ 5 ಮಲ್ಟಿ ಆಕ್ಸಲ್ ಸ್ವೀಪರ್ ವಾಹನಗಳನ್ನು ಖರೀದಿಸಲಾಗಿದೆ ಹಾಗೂ 60 ನಾನ್ ಎಸಿ ಸ್ವೀಪರ್ (ಪಲ್ಲಕ್ಕಿ) ವಾಹನಗಳಿಗೆ ಖರೀದಿ ಆದೇಶ ಬಿಡುಗಡೆ ಮಾಡಲಾಗಿದ್ದು, ಮಾರ್ಚ್-2026ರೊಳಗೆ ಸೇರ್ಪಡೆಗೊಳಿಸಲಾಗುವುದು ಎಂದಿದ್ದಾರೆ.
ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಬಸವ ವಸತಿ ಯೋಜನೆಯ ಸಹಾಯಧನ ಹೆಚ್ಚಳ
ಹೀಗಿದೆ ಇಂದು ಬೆಳಗಾವಿಯ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕರಿಸಿದ ವಿಧೇಯಕಗಳ ಪಟ್ಟಿ








