ಬೆಂಗಳೂರು: ಪ್ರಯಾಣಿಕರೊಬ್ಬರು ಬಿಎಂಟಿಸಿ ಬಸ್ಸೊಂದನ್ನು ಏರಿ, ತಾನು ಇಳಿಯುವಂತ ಸ್ಥಳಕ್ಕೆ ರೂ.15 ಇದ್ದ ಕಾರಣ, ಚಿಲ್ಲರೇ ಇಲ್ಲದೇ ರೂ.20 ನೀಡಿದ್ದರು. ಇನ್ನುಳಿದ ರೂ.5 ಚಿಲ್ಲರೇ ಬಾಕಿ ಕೇಳಿದ್ದಕ್ಕೆ ಪ್ರಯಾಣಿಕನೊಂದಿಗೆ ಅನುಚಿತವಾಗಿ ಬಿಎಂಟಿಸಿ ಕಂಡಕ್ಟರ್ ನಡೆದುಕೊಂಡಿದ್ದರು. ಈ ಪ್ರಕರಣದಲ್ಲಿ ಅನುಚಿತ ವರ್ತನೆ ತೋರಿದಂತ ನಿರ್ವಾಹಕನನ್ನು ಅಮಾನತುಗೊಳಿಸಿ ಬಿಎಂಟಿಸಿ ಆದೇಶಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ನಿಗಮವು, ದಿನಾಂಕ 06-08-2024 ರಂದು ಬೆಂಮಸಾಸಂಸ್ಥೆಯ ಘಟಕ – 32 (ಸೂರ್ಯ ಸಿಟಿ) ರ ನಿರ್ವಾಹಕರು ಮಾರ್ಗ ಸಂಖ್ಯೆ ಇವಿ 500 ಡಿಸಿ/7 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ ಸಮಯ ಸುಮಾರು ರಾತ್ರಿ 09:40 ಗಂಟೆಗೆ, ಸದರಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಅಭಿನವ್ ರಾಜ್ ಎಂಬುವರು ಬಾಕಿ ರೂ.5 ಚಿಲ್ಲರೆ ವಾಪಸ್ಸು ನೀಡುವಂತೆ ಕೋರಿದಾಗ, ಸದರಿ ನಿರ್ವಾಹಕರು ಸಾರ್ವಜನಿಕ ಪ್ರಯಾಣಿಕರ ಎದುರು ಅನುಚಿತವಾಗಿ ವರ್ತಿಸಿರುವುದು ಕಂಡು ಬಂದ ಹಿನ್ನಲೆಯಲ್ಲಿ ಸದರಿ ನಿರ್ವಾಹಕರನ್ನು ಈ ಕೂಡಲೇ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡಲಾಗಿದೆ ಎಂದು ತಿಳಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದಲ್ಲದೇ, ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುವುದು ಸುರಕ್ಷಿತ ಎನ್ನುವ ಭಾವನೆ ಉಂಟಾಗಲು ಅಗತ್ಯವಿರುವ ಕ್ರಮಗಳನ್ನು ಸಹ ಕೈಗೊಳ್ಳಲಾಗಿರುತ್ತದೆ. ಪ್ರಯಾಣಿಕರ ಮೇಲೆ ಯಾವುದೇ ತರಹದ ದೌರ್ಜನ್ಯ, ಅಸಭ್ಯ ವರ್ತನೆ ಮತ್ತು ಅಹಿತಕರ ಘಟನೆಗಳು ಕಂಡುಬಂದಲ್ಲಿ ತಪ್ಪಿತಸ್ಥರ ಮೇಲೆ ಕಠಿಣ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ.