ಬೆಂಗಳೂರು: ನಗರದಲ್ಲಿ ನಮ್ಮ ಮೆಟ್ರೋ ರೈಲು ತಡೆದು ರೈಲು ಪ್ರಯಾಣಕ್ಕೆ ವಿಳಂಬ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಮೆಟ್ರೋ ರೈಲು ತಡೆದವರ ವಿರುದ್ದ ಬಿಎಂಆರ್ ಸಿಎಲ್ ದೂರು ನೀಡಿದೆ. ಹೀಗಾಗಿ ಮೆಟ್ರೋ ರೈಲು ತಡೆದಂತವರ ವಿರುದ್ಧ ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 17ನೇ ನವೆಂಬರ್ 2025ರ ಮುಂಜಾನೆ, ಕೆಲವು ವ್ಯಕ್ತಿಗಳ ಗುಂಪು ಹಳದಿಮಾರ್ಗದ ಮೊದಲ ರೈಲು ಹೊರಡುವುದನ್ನು ಆರ್.ವಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿತು. ಇದರ ಪರಿಣಾಮವಾಗಿ, 6:00ಕ್ಕೆ ಹೊರಡಬೇಕಿದ್ದ ರೈಲು 6:35ಕ್ಕೆ ಹೊರಟಿತು. ಇದರಿಂದಾಗಿ ಎಲ್ಲಾ ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಯಿತು. ಸೇವೆಯನ್ನು ಸ್ಥಿರಗೊಳಿಸಲು, ಒಂದು ರೈಲನ್ನು ಸೆಂಟ್ರಲ್ ಸಿಲ್ಕ್ ಬೋರ್ಡ್ ನ ಲ್ಲಿ ಶಾರ್ಟ್-ಲೂಪ್ ಮಾಡಬೇಕಾಯಿತು. ಇಂತಹ ಕೃತ್ಯಗಳು ಅನೇಕ ಸಹ ಪ್ರಯಾಣಿಕರಿಗೆ ಅನಾನುಕೂಲತೆ ಉಂಟು ಮಾಡುವುದಷ್ಟೇ ಅಲ್ಲದೆ, ಮೆಟ್ರೋ ಸಂಚಾರದ ಸುರಕ್ಷತೆ ಮತ್ತು ದಕ್ಷತೆಯ ಕಾರ್ಯಾಚರಣೆಯನ್ನೂ ಹಾನಿಗೊಳಿಸುತ್ತವೆ ಎಂದಿದೆ.
ಮೆಟ್ರೋ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002ರ ಪ್ರಕಾರ, ಇಂತಹ ವ್ಯತ್ಯಯಗಳಿಗೆ ಸಜೆ, ದಂಡ ಅಥವಾ ಎರಡನ್ನು ವಿಧಿಸಬಹುದು. ಈ ಬಗ್ಗೆ ಮುಂದಿನ ಕ್ರಮಕ್ಕಾಗಿ ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದೆ.
ನವೆಂಬರ್ 1 ರಿಂದ, 5ನೇ ರೈಲ್ ಅನ್ನು ಪರಿಚಯದೊಂದಿಗೆ, ಹಳದಿ ಮಾರ್ಗದ ಸೇವೆಯ ಆರಂಭವನ್ನು 6:30ರಿಂದ 6:00ಕ್ಕೆ ಪ್ರಾರಂಭಿಸಲಾಗಿದೆ. ಪೀಕ್ ಅವರ್ ಹೆಡ್‌ವೇಯ್ಲಲಿ ರೈಲುಗಳನ್ನು19 ನಿಮಿಷದಿಂದ 15 ನಿಮಿಷಕ್ಕೆ ಆವರ್ತನವನ್ನು ಕಡಿಮೆಗೊಳಿಸಲಾಯಿತು. ಮುಂಬರುವ ತಿಂಗಳುಗಳಲ್ಲಿ ಹೆಚ್ಚುವರಿ ರೈಲು ಸೆಟ್ ಗಳನ್ನು ಕಾರ್ಯಾರಂಭ ಮಾಡುವುದರಿಂದ ಹಳದಿ ಮಾರ್ಗದ ಸೇವೆ ಇನ್ನಷ್ಟು ಉತ್ತಮವಾಗಲಿದೆ ಎಂದು ಹೇಳಿದೆ.
ನಮ್ಮ ಮೆಟ್ರೋ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಸೇವೆಗಳನ್ನು ಒದಗಿಸಲು ಬದ್ಧವಾಗಿದೆ. ಪ್ರಸ್ತುತ, ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ಪೀಕ್ ಅವಧಿಯಲ್ಲಿ ಹಳದಿ ಮಾರ್ಗದಲ್ಲಿ ಎಲ್ಲಾ ರೈಲುಗಳನ್ನು ಬಳಸುತ್ತಿದ್ದು ಶೇ 100% ರಷ್ಟು ಪೀಕ್ ಆವರ್ತನಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಯಾಣಿಕರ ಅನುಕೂಲಕ್ಕೆ ಆದ್ಯತೆ ನೀಡುತ್ತದೆ-ನಿರ್ವಹಣಾ ಮೀಸಲುಗಾಗಿ ತಾತ್ಕಾಲಿಕವಾಗಿ ಬಿಡಿ ರೈಲಿನ ನಿಬಂಧನೆಯನ್ನು ಸಹ ಮುಂದೂಡಿದೆ ಎಂದಿದೆ.
ಬಿಎಂಆರ್‌ಸಿಎಲ್, ಎಲ್ಲಾ ಪ್ರಯಾಣಿಕರು ಸಹಕರಿಸಿ ಮೆಟ್ರೋ ಸೇವೆಯನ್ನು ಸರಾಗವಾಗಿ ನಡೆಯಲು ಸಹಾಯ ಮಾಡುವಂತೆ ವಿನಂತಿಸುತ್ತದೆ. ಪ್ರಯಾಣಿಕರ ಅನುಭವವನ್ನು ಸುಧಾರಿಸಲು ಮತ್ತು ವಿಶ್ವಾಸಾರ್ಹ ಸೇವೆ ನೀಡಲು ನಾವು ಸದಾ ಬದ್ಧರಾಗಿದ್ದೇವೆ ಎಂದು ಬಿಎಂಆರ್ ಸಿ ಎಲ್ ತಿಳಿಸಿದೆ.
Watch Video: ‘ಶಾಸಕ’ರ ಮೇಲಿನ ಪ್ರೀತಿಯ ಅಭಿಮಾನಕ್ಕೆ ಹಾಡು ಬರೆದು ಹಾಡಿದ ‘ಶಾಲಾ ಮಕ್ಕಳು’








