ಬೆಂಗಳೂರು : ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆ-2026ರ ಅಂಗವಾಗಿ ಯಶವಂತಪುರದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ (ಬೆಂಗಳೂರು ಉತ್ತರ) ಆವರಣದಲ್ಲಿ ಇಂದು ‘ವಿಶೇಷ ರಕ್ತದಾನ ಶಿಬಿರ’ ಮತ್ತು ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ (RTO) ಬಿ.ಶ್ರೀನಿವಾಸ ಪ್ರಸಾದ್ ಅವರು, ರಸ್ತೆ ಸುರಕ್ಷತೆ ಮತ್ತು ರಕ್ತದಾನದ ಮಹತ್ವದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ನಂತರ ಮಾತನಾಡಿದ ಅವರು, ಹೆಚ್ಚಿನ ಸಂದರ್ಭಗಳಲ್ಲಿ ರಸ್ತೆ ಬಳಕೆದಾರರ ಅಜಾಗರೂಕತೆ ಅಥವಾ ರಸ್ತೆ ಸುರಕ್ಷತೆಯ ನಿಯಮಗಳ ಅರಿವಿನ ಕೊರತೆಯಿಂದಾಗಿಯೇ ಭೀಕರ ಅಪಘಾತಗಳು ಸಂಭವಿಸುತ್ತವೆ. ಮನುಷ್ಯನಿಗೆ ಬದುಕಲು ಬೇಕಾದ ಇತರೆ ಮೂಲಭೂತ ಕೌಶಲ್ಯಗಳು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ‘ರಸ್ತೆ ಸುರಕ್ಷತಾ ಶಿಕ್ಷಣ’ವನ್ನು ಕಲಿಯುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಶ್ರೀನಿವಾಸ ಪ್ರಸಾದ್ ಅವರು ಅಭಿಪ್ರಾಯಪಟ್ಟರು.
ರಸ್ತೆ ಸುರಕ್ಷತಾ ಸಪ್ತಾಹ ಮತ್ತು ಮಾಸಾಚರಣೆಯು ಕೇವಲ ಒಂದು ಆಚರಣೆಯಲ್ಲ, ಇದೊಂದು ರಾಷ್ಟ್ರವ್ಯಾಪಿ ಅಭಿಯಾನವಾಗಿದೆ. ಅಸ್ತಿತ್ವದಲ್ಲಿರುವ ಮತ್ತು ಹೊಸದಾಗಿ ಲೈಸೆನ್ಸ್ ಪಡೆಯುವ ಸಂಭಾವ್ಯ ಚಾಲಕರಲ್ಲಿ ಸುರಕ್ಷಿತ ಚಾಲನಾ ಅಭ್ಯಾಸಗಳನ್ನು ಉತ್ತೇಜಿಸುವುದು, ಆ ಮೂಲಕ ವಾರ್ಷಿಕವಾಗಿ ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವು-ನೋವುಗಳ ಸಂಖ್ಯೆಯನ್ನು ತಗ್ಗಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.
ಇದೇ ವೇಳೆ ನಡೆದ ರಕ್ತದಾನ ಶಿಬಿರದ ಕುರಿತು ಮಾತನಾಡಿದ ಅವರು, ರಕ್ತಕ್ಕೆ ಪರ್ಯಾಯವಿಲ್ಲ ಮತ್ತು ಇದನ್ನು ಕೃತಕವಾಗಿ ತಯಾರಿಸಲೂ ಸಾಧ್ಯವಿಲ್ಲ. ಶಸ್ತ್ರಚಿಕಿತ್ಸೆ ಅಥವಾ ಅಪಘಾತದ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುವವರಿಗೆ ದಾನಿಗಳ ರಕ್ತವೇ ಸಂಜೀವಿನಿಯಾಗುತ್ತದೆ. ನಿಮ್ಮ ರಕ್ತವನ್ನು ದಾನ ಮಾಡುವ ನಿರ್ಧಾರವು ಒಂದು ಜೀವವನ್ನು ಉಳಿಸಬಹುದು ಅಥವಾ ರಕ್ತದ ಘಟಕಗಳಾದ ಪ್ಲೇಟ್‌ಲೆಟ್‌ಗಳು ಮತ್ತು ಪ್ಲಾಸ್ಮಾಗಳನ್ನು ಬೇರ್ಪಡಿಸಿ ಬಳಸುವ ಮೂಲಕ ಹಲವರ ಪ್ರಾಣ ಉಳಿಸಬಹುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಕಲ್ಪ ಇಂಡಿಯಾ ಫೌಂಡೇಷನ್‌ನ ನರಸಿಂಹ ಶಾಸ್ತ್ರೀ, ಡಾ. ಗಿರೀಶ್ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿಯ ಸಿಬ್ಬಂದಿ ವರ್ಗದವರು ಹಾಜರಿದ್ದು, ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕೇಂದ್ರ ಸರ್ಕಾರದ ಟೀಕೆಗಾಗಿ ರಾಜ್ಯಪಾಲ ಹುದ್ದೆಯ ದುರ್ಬಳಕೆ: ಬಿವೈ ವಿಜಯೇಂದ್ರ ಆಕ್ರೋಶ
‘ಇ-ಹಾಜರಾತಿ’ ಪರಿಗಣಿಸದೇ ‘ಗ್ರಾಮ ಪಂಚಾಯ್ತಿ ಸಿಬ್ಬಂದಿ ವೇತನ’ ಪಾವತಿಸಿ: ರಾಜ್ಯ ಸರ್ಕಾರ ಆದೇಶ








