ಬೆಂಗಳೂರು : ಮಳೆ, ಡೆಂಗ್ಯೂ, ರಸ್ತೆ ಅಪಘಾತ ಸೇರಿದಂತೆ ಪ್ರತ್ಯೇಕ ಘಟನೆಗಳಲ್ಲಿ ರಾಜ್ಯದಲ್ಲಿ ನಿನ್ನೆ ಒಂದೇ ದಿನ ಹತ್ತಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ರಾಜ್ಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಭಾರೀ ಮಳೆಗೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ಮನೆಗೋಡೆ ಕುಸಿದು ಮೂವರು ಸಾವನ್ನಪ್ಪಿದ್ದರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಸಮೀಪ ರೈಲು ಹರಿದು ಮೂವರು ಯುವಕರು ಸ್ಥಳದಲ್ಲೇ ಮೃತಟ್ಟಿದ್ದಾರೆ. ಭಾರಿ ಮಳೆಯಿಂದ ಮನೆ ಕುಸಿದು ಬಿದ್ದು ಬಾಣಂತಿ ಮೃತಪಟ್ಟಿರುವ ಘಟನೆ ಮೈಸೂರು (Mysore) ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದೆ. ಹೇಮಲತಾ (22) ಮೃತ ದುರ್ಧೈವಿ. ಮಗು ಬದುಕುಳಿದಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮನೆ ಗೋಡೆ ಶಿಥಿಲಗೊಂಡಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಗುರುಪುರದಲ್ಲಿ ಭಾರಿ ಗಾಳಿ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಯುವತಿ ಮೃತಪಟ್ಟಿದ್ದಾಳೆ. ಆಶ್ನಿ (21) ಮೃತ ದುರ್ದೈವಿ ಬೆಂಗಳೂರಿನಲ್ಲಿ .ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ಎಂಬಿಬಿಎಸ್ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 23 ವರ್ಷದ ಇಶಾನ್ ಮೃತ ದುರ್ದೈವಿ. ಬಂಟ್ವಾಳದ ಪುಂಜಾಲಕಟ್ಟೆಯಲ್ಲಿ ಲಾರಿ ಪಲ್ಟಿಯಾಗಿ ಓರ್ವ ಮೃತಪಟ್ಟಿದ್ದು, ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಫರಂಗಿಪೇಟೆ ನಿವಾಸಿ ಕಾರ್ತಿಕ್ ಮೃತ ದುರ್ದೈವಿ. ಅಪರಿಚಿತ ವಾಹನ ಡಿಕ್ಕಿಯಾಗಿ ಕರ್ತವ್ಯನಿರತ ಎಎಸ್ಐ ಮೃತಪಟ್ಟಿರುವ ಘಟನೆ ಕೊಪ್ಪಳ ತಾಲೂಕಿನ ಒಣಬಳ್ಳಾರಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಮುನಿರಾಬಾದ್ ಪೊಲೀಸ್ ಠಾಣೆ ಎಎಸ್ಐ ರಾಮಣ್ಣ (55) ಮೃತ ದುರ್ದೈವಿ.
ಹಾಸನದಲ್ಲಿ ಶಂಕಿತ ಡೆಂಘೀಗೆ ಎಂಬಿಬಿಎಸ್ ವಿದ್ಯಾರ್ಥಿ ಮೃತಪಟಿದ್ದಾರೆ. ಹೊಳೆನರಸೀಪುರ ತಾಲ್ಲುಕಿನ ಹಳ್ಳೀ ಮೈಸೂರು ಹೋಬಳಿಯ ಗೋಹಳ್ಳಿ ಗ್ರಾಮದ ಕುಶಾಲ್ (22) ಮೃತ ವಿದ್ಯಾರ್ಥಿ. ದಾವಣಗೆರೆ ಜಿಲ್ಲೆಯಲ್ಲಿ ಶಂಕಿತ ಡೆಂಘೀ ಜ್ವರದಿಂದ ಬಳಲುತ್ತಿದ್ದ ಯುವತಿ ಮೃತಪಟ್ಟಿದ್ದಾಳೆ. ಜಗಳೂರ ಪಟ್ಟಣದ ನಿವಾಸಿ ರೇಖಾ (19) ಮೃತ ದುರ್ದೈವಿ.
ಮಾನಸಿಕವಾಗಿ ನೊಂದ ಯೂಟ್ಯೂಬ್ ಚಾನಲ್ ವರದಿಗಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಧರ್ಮನಾಯಕನ ತಾಂಡ್ಯ ಗ್ರಾಮದ ಬಳಿ ನಡೆದಿದೆ. ದಾಸರಹಳ್ಳಿ ಯೂಟ್ಯೂಬ್ ಕನ್ನಡ ಟಿವಿ ವರದಿಗಾರ ಮಂಜುನಾಥ್ (40) ಮೃತ ದುರ್ದೈವಿ. ಮರಕ್ಕೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಹೊರ ವಲಯದ ರಿಂಗ್ ರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದಾರೆ. ಮೈಸೂರಿನ ಕೂರ್ಗಳ್ಳಿ ಗ್ರಾಮದ ನಿವಾಸಿಗಳಾದ ಚಂದ್ರು ಮತ್ತು ಪ್ರೇಮಾ ಮೃತ ದಂಪತಿ.