ಶಿವಮೊಗ್ಗ: ಹಕ್ಕಿಪಿಕ್ಕಿ ಜನಾಂಗದ ಬಗ್ಗೆ ಮಾತನಾಡಿದಂತ ಸಾಗರ ಬ್ಲಾಕ್ ಕಾಂಗ್ರೆಸ್ ಮುಖಂಡರ ವಿರುದ್ಧ ಬಿಜೆಪಿ ನಾಯಕ ಹಾಗೂ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೋಡು ವಾಗ್ಧಾಳಿ ನಡೆಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಆನಂದಪುರದಲ್ಲಿನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ನಿನ್ನೆ ಬ್ಲಾಕ್ ಕಾಂಗ್ರೆಸ್ ನಾಯಕರು ಪತ್ರಿಕಾ ಗೋಷ್ಠಿ ನಡೆಸಿದ್ದಾರೆ. ಯಾರೋ ಒಬ್ಬ ಬೆಂಬಲಿಗನನ್ನು ಕೂರಿಸಿಕೊಂಡು ಪ್ರೆಸ್ ಮೀಟ್ ಮಾಡಲಾಗಿದೆ. ಅವರು ಯಾವ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ ಎನ್ನುವುದು ಸಾಗರ ವಿಧಾನಸಭಾ ಕ್ಷೇತ್ರದ ಜನರಿಗೆ ಗೊತ್ತಿದೆ ಅಂತ ಹೇಳಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿರುವುದರ ಬಗ್ಗೆ ಇವರು ಯಾಕೆ ಹೋದ್ರು ಅಂತ ಕೇಳಿದ್ದಾರೆ. ಅವರು ಮಾಜಿ ಶಾಸಕರು, ಸಚಿವರು ಆಗಿದ್ದವರು. ಯಾಕೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಅಂತ ಕೇಳುವ ನೈತಿಕತೆ ಯಾರಿಗೂ ಇಲ್ಲ. ಎಲ್ಲಾ ಕಡೆ ಭೇಟಿ ನೀಡುತ್ತಾರೆ. ಕಾಮಗಾರಿಗಳನ್ನೂ ವೀಕ್ಷಣೆ ಮಾಡುತ್ತಾರೆ ಎಂದರು.
ಯಾರೋ ಕಾಂಗ್ರೆಸ್ ನಲ್ಲಿ ಲಾಭದಾಯಕ ಹುದ್ದೆ ನಿರೀಕ್ಷೆ ಇರುವವರು ಈ ರೀತಿ ಮಾತನಾಡಿದ್ದಾರೆ. ಅವರು ಯಾರು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಲ್ಲ. ಅವರೆಲ್ಲ ಹುದ್ದೆಗಾಗಿ ಇರೋರು ಅಂತ ವಾಗ್ಧಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಇವರನ್ನು ದೂರ ಇಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿದೆ ಅಂತ ಎಚ್ಚರಿಸಿದರು.
ಹಕ್ಕಿಪಿಕ್ಕಿ ಜನಾಂಗ ಇಡೀ ದೇಶವೇ ತಮ್ಮದೇ ಆದಂತ ಸಾಂಸ್ಕೃತಿಕ, ಸಾಂಪ್ರದಾಯಿಕ ನೆಲೆಯಲ್ಲಿ ಗುರ್ತಿಸಿಕೊಂಡಿರುವಂತ ಸಮುದಾಯವಾಗಿದೆ. ಇವರ ಬಗ್ಗೆಯೇ ಅವರು ನೀಡಿರುವಂತ ಹೇಳಿಕೆ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಅಂತಹ ಜನಾಂಗದ ನಾಯಕನಾಗಿ ನಾನು ಗುರ್ತಿಸಿಕೊಂಡಿದ್ದೇನೆ. ಆ ಸಮುದಾಯದವರಿಗಾಗಿ ದುಡಿಯುತ್ತಿದ್ದೇನೆ ಅಂತ ತಿಳಿಸಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಹೆಸರು ಹೇಳದೇ ಸಹಕಾರ ಸಂಘದ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದಂತ ರತ್ನಾಕರ ಹೊನಗೋಡು ಅವರು, ಸಹಕಾರ ಸಂಘದ ಚುನಾವಣೆಯಲ್ಲಿ ನೈತಿಕತೆಯಿಂದ ಗೆದ್ದ ಗೆಲುವಲ್ಲ. 26 ಮಂದಿಯನ್ನು ಹೋಟೆಲ್ ನಲ್ಲಿ ಇರಿಸಿ ರೆಸಾರ್ಟ್ ರಾಜಕಾರಣದ ಮೂಲಕ ಗೆದ್ದ ಗೆಲುವಾಗಿದೆ. ನಾನು 1 ಮತದಿಂದ ಸೋತರೂ, ನನ್ನದು ಸೋಲಲ್ಲ, ಗೆಲುವು. ನೈತಿಕವಾಗಿ ಗೆದ್ದ ಗೆಲುವಿನ ಸೋಲು. ನನಗೆ 14 ಮತಗಳು ಸಹಕಾರ ಚುನಾವಣೆಯಲ್ಲಿ ಬಿದ್ರೆ, ಅವರಿಗೆ 15 ಮತಗಳು ಬಿದ್ದಿದ್ದಾವೆ ಎಂದರು.
ಸಾಗರ, ಆನಂದಪುರಗಳಲ್ಲಿ ಡೆಂಗ್ಯೂ ಕೇಸ್ ಹೆಚ್ಚಾಗುತ್ತಿವೆ. ಆದರೂ ನಿಯಂತ್ರಣ ಕ್ರಮವನ್ನು ವಹಿಸೋದು ಬಿಟ್ಟು ಫಾರಿನ್ ಗೆ ಹೋಗಿದ್ದಾರೆ. ಇವರಿಗೆ ಜನರ ಬಗ್ಗೆ ಕಾಳಜಿ ಇದ್ಯಾ? ಅಂತ ಪ್ರಶ್ನಿಸಿದರು.
ಹಕ್ಕಿಪಿಕ್ಕಿ ಜನಾಂಗದ ಬಗ್ಗೆ ನೀಡಿರುವಂತ ಹೇಳಿಕೆ ಅವರ ಬಗ್ಗೆ ವಿರುದ್ಧ ಕೇಸ್ ಹಾಕೋದಕ್ಕೆ ಸಮುದಾಯದ ಮುಖಂಡರು ಮುಂದಾಗಿದ್ದಾರೆ. ಹಕ್ಕಿಪಿಕ್ಕಿಗಳ ಬಗ್ಗೆ ನೀಡಿದಂತ ಹೇಳಿಕೆ ದಲಿತ ಸಮುದಾಯಕ್ಕೆ ಇವರು ಮಾಡಿದಂತ ಅವಮಾನವಾಗಿದೆ. ಅಂಬೇಡ್ಕರ್ ಸಂವಿಧಾನದಲ್ಲಿ ಗೌರವ ಕೊಡುವ ಸೌಲಭ್ಯವನ್ನು ಈ ಸಮುದಾಯಕ್ಕೆ ಕಲ್ಪಿಸಿಕೊಟ್ಟಿದ್ದಾರೆ. ಆ ಕೆಲಸವನ್ನು ಕಾಂಗ್ರೆಸ್ ನವರು ಮಾಡಬೇಕಿತ್ತು. ಆದ್ರೇ ಮಾಡಿಲ್ಲ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇದ್ದರೇ, ಅಂಬೇಡ್ಕರ್ ಅವರಿಗೆ ಗೌರವ ಕೊಡುವುದಾದದರೇ ಹಕ್ಕಿಪಿಕ್ಕಿ ಸಮುದಾಯದ ಬಗ್ಗೆ ಹೇಳಿಕೆ ನೀಡಿದಂತವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸುವಂತೆ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೋಡು ಆಗ್ರಹಿಸಿದರು.
ಈ ವೇಳೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರೇವಪ್ಪ ಹೊಸಕೊಪ್ಪ, ಆನಂದಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೋಹನ್ ಕುಮಾರ್.ಎಸ್, ಆನಂದಪುರದ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಕುಮಾರ್ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು