ಬೆಂಗಳೂರು: ಭ್ರಷ್ಟಾಚಾರ ಹಾಗೂ ಯುವಜನತೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಡ್ರಗ್ ಮಾಫಿಯಾದ ವಿರುದ್ಧ ರಾಜ್ಯ ಬಿಜೆಪಿಯಿಂದ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.
ಕರ್ನಾಟಕದಲ್ಲಿ ಸತ್ತಂತಿರುವ ಪೊಲೀಸ್ ಇಲಾಖೆಯನ್ನು ಎಚ್ಚರಿಸಿ ರಾಜಕೀಯದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲಿದ್ದೇವೆ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ಕುರಿತು ಜನರಿಗೆ ಎಚ್ಚರಿಕೆ ನೀಡಲು ಹಾಗೂ ಕಾಂಗ್ರೆಸ್ ಸರ್ಕಾರವು ವಿವಿಧ ಯೋಜನೆಗಳ ಬಗ್ಗೆ ಹರಡುತ್ತಿರುವ ಅಪಪ್ರಚಾರದ ವಿರುದ್ಧ ಸತ್ಯಾಂಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನೂ ನಾವು ಜವಾಬ್ದಾರಿಯಿಂದ ನಿರ್ವಹಿಸಲು ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದೇವೆ. ರಾಜ್ಯದ ಎಲ್ಲ ಮಂಡಲಗಳಲ್ಲಿ ಏಕರೂಪದ ಕಾರ್ಯಯೋಜನೆಗಳು ಮತ್ತು ಕಲಾಪಗಳು ನಡೆಯಬೇಕು ಎನ್ನುವ ಉದ್ದೇಶದಿಂದ ಕಾರ್ಯಕರ್ತರಿಗೆ ವಿಶೇಷ ತರಬೇತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಜಿ ಸಿಎಂ ವಿವರಿಸಿದರು.
ಮುಂಬರುವ ಚುನಾವಣಾ ಸವಾಲುಗಳ ಕುರಿತು ಮಾತನಾಡಿದ ಅವರು, ರಾಜ್ಯದ ಎರಡು ವಿಧಾನಸಭಾ ಉಪಚುನಾವಣೆಗಳು ಮತ್ತು ನಾಲ್ಕು ವಿಧಾನ ಪರಿಷತ್ ಚುನಾವಣೆಗಳಿಗೆ ಸಜ್ಜಾಗುತ್ತಿದ್ದೇವೆ. ಇದರ ಜತೆಗೆ ಇಡೀ ರಾಜ್ಯದಲ್ಲಿ ನಡೆಯಲಿರುವ ಗ್ರಾಮ ಹಾಗೂ ಪಟ್ಟಣ ಪಂಚಾಯತ್ ಚುನಾವಣೆಗಳಿಗೂ ಪಕ್ಷವನ್ನು ಸಮರ್ಥವಾಗಿ ತಯಾರು ಮಾಡುವ ಕೆಲಸ ನಡೆಯುತ್ತಿದೆ ಎಂದು ಡಿವಿಎಸ್ ಹೇಳಿದರು.
ಸರಣಿ ಸಭೆಗಳ ಮೂಲಕ ಸಂಘಟನಾತ್ಮಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಇನ್ನೂ ಮೂರು-ನಾಲ್ಕು ದಿನಗಳ ಕಾಲ ಇದು ಹೀಗೆಯೇ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಎಲ್ಲ ಜಿಲ್ಲೆಗಳ ಕಾರ್ಯಕರ್ತರೊಡನೆ ಅಲ್ಲಿನ ಸ್ಥಳೀಯ ಸಮಸ್ಯೆಗಳು ಹಾಗೂ ಕುಂದುಕೊರತೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ, ಅವುಗಳಿಗೆ ಸೂಕ್ತ ಪರಿಹಾರ ಸೂಚಿಸುವ ಪ್ರಾಮಾಣಿಕ ಪ್ರಯತ್ನವನ್ನು ಪಕ್ಷದ ವತಿಯಿಂದ ಮಾಡಲಾಗುತ್ತಿದೆ ಎಂದು ಸದಾನಂದ ಗೌಡ ವಿವರಿಸಿದರು.
ʼಸರ್ʼನಲ್ಲಿ ಬಿಜೆಪಿ ಸಕ್ರಿಯ: ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ಬಿಜೆಪಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಬೂತ್ ಮಟ್ಟದಲ್ಲಿ ಕಂಡುಬರುತ್ತಿರುವ ಅಕ್ರಮ ಎಂಟ್ರಿಗಳನ್ನು ಹಾಗೂ ಇತರೆ ಲೋಪದೋಷಗಳನ್ನು ಪತ್ತೆಹಚ್ಚಿ ಸರಿಪಡಿಸುವ ಮಹತ್ತರ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಸದಾನಂದ ಗೌಡ ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಗೌಡರು, ರಾಜ್ಯದ ಜನತೆ ಕಾಂಗ್ರೆಸ್‌ನ ಗೂಂಡಾ ರಾಜಕಾರಣ ಮತ್ತು ದುರ್ವ್ಯವಹಾರಗಳಿಂದ ಬೇಸತ್ತಿದ್ದು, ಬಿಜೆಪಿ ಇದರ ವಿರುದ್ಧ ಹೋರಾಡಲೇಬೇಕಿದೆ ಎಂದರು.
ಚುನಾವಣೆಗಾಗಿ ಈಗಾಗಲೇ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಪ್ರಮುಖರೊಂದಿಗೆ ರಣತಂತ್ರ ಆರಂಭಿಸಲಾಗಿದ್ದು, ಅಂತಿಮ ಆಯ್ಕೆ ಹೈಕಮಾಂಡ್ ನಿರ್ಧರಿಸಲಿದೆ. ಆದರೆ ರಾಜ್ಯದ ಬೊಕ್ಕಸದ ಹಣವನ್ನು ಪತ್ರಿಕೆಗಳಲ್ಲಿ ಸ್ವಯಂ ಪ್ರಚಾರಕ್ಕಾಗಿ ಬಳಸುತ್ತಿರುವ ಸರ್ಕಾರದ ನಡೆ ಅಕ್ಷಮ್ಯ ಎಂದು ಅವರು ಅಭಿಪ್ರಾಯಪಟ್ಟರು.
BREAKING: ಮಂಡ್ಯದ ಮದ್ದೂರು ಬಳಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು.!
BREAKING: 2020-21ನೇ ಸಾಲಿನ ಡಾ.ರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್, ವಿಷ್ಣವರ್ಧನ್ ಪ್ರಶಸ್ತಿ ಪ್ರಕಟ, ಇಲ್ಲಿದೆ ಪಟ್ಟಿ








