ಕಲಬುರಗಿ: ಸಂಸದ ಉಮೇಶ ಜಾಧವ ಅವರ ಕಾರ್ಯವೈಖರಿ ವಿರುದ್ದ ಬಿಜೆಪಿ ಪಕ್ಷದ ಕಾರ್ಯಕರ್ತರೇ ‘ ಗೋಬ್ಯಾಕ್ ‘ ಅಭಿಯಾನ ಪ್ರಾರಂಭಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ದಿಗ್ಗಾಂವ ಜಿಲ್ಲಾ ಪಂಚಾಯತ ವ್ಯಾಪ್ತಿಯ ಅಳ್ಳೊಳ್ಳಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಂಸದರಾದ ನಂತರ ಜಾಧವ ಏನು ಕೆಲಸ ಮಾಡಿದ್ದೀರಿ ಪಟ್ಟಿ ಕೊಡಿ ಎಂದು ಅವರದೇ ಪಕ್ಷದ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಆದರೆ ಜಾಧವ ಬಳಿ ಉತ್ತರವಿಲ್ಲ. ಆದರೆ, ನಾವು ನಿಮಗೆ ಭರವಸೆ ನೀಡಿದಂತೆ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ ಜೊತೆಗೆ ರೂ 431 ಕೋಟಿ ವೆಚ್ಚದ ಕಾಮಗಾರಿಗಳನ್ನು ಈ ಗ್ರಾಮಕ್ಕೆ ತಂದು ನಿಮ್ಮ ಬಳಿ ಮತ ಕೇಳುತ್ತಿದ್ದೇವೆ. ಇದು ನಮ್ಮ ಬದ್ದತೆ ಎಂದರು.
ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಜೆಡಿಎಸ್ ನಾಯಕರಿಗೆ ಹೊಟ್ಟೆಯುರಿ ಶುರುವಾಗಿದೆ. ಹಾಗಾಗಿ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ನೀವೆಲ್ಲ ದಾರಿ ತಪ್ಪಿದ್ದೀರಾ ? ಎಂದು ಮಹಿಳೆಯರಿಗೆ ಪ್ರಶ್ನಿಸಿದರು.
ಅಭಿವೃದ್ದಿ ಕುರಿತಂತೆ ಬಹಿರಂಗ ಚರ್ಚೆಗೆ ಕರೆದರೆ ಬಿಜೆಪಿಗರು ಬರುತ್ತಿಲ್ಲ. 25 ಸಂಸದರು ಉತ್ತರ ಕುಮಾರರು ಇದ್ದಂತೆ. ರಾಜ್ಯಕ್ಕೆ ಬರಬೇಕಾದ ಪರಿಹಾರ ಹಾಗೂ ಅನುದಾನ ಬರದಿದ್ದರೂ ಬಾಯಿ ಮುಚ್ಚಿಕೊಂಡಿದ್ದಾರೆ. ಅವರ ದಮ್ಮು ತಾಕತ್ತು ಏನಿದ್ದರೂ ಇಲ್ಲೇ ನೋಡಬೇಕು ಎಂದು ತರಾಟೆ ತೆಗೆದುಕೊಂಡರು.
ಕಲಬುರಗಿ ಜನರ ಮತ ಕೇಳುವ ಜಾಧವ ಜನರಿಗೆ ಅನುಕೂಲ ಮಾಡಿಕೊಡುವ ಜವಾಬ್ದಾರಿ ಇಲ್ಲವೇ? ನಾವು ಜಾರಿಗೆ ತಂದ ಕನಿಷ್ಠ 500 ಯೋಜನೆಗಳನ್ನು ನಿಮಗೆ ತೋರಿಸುತ್ತೇನೆ. ನೀವು ಕನಿಷ್ಠ 5 ಅಭಿವೃದ್ದಿ ಯೋಜನೆ ಜಾರಿಮಾಡಿದ್ದರೆ ತೋರಿಸಿ ಎಂದು ಸವಾಲ್ ಹಾಕಿದರು.
ಕಳೆದ ಸಲ ಖರ್ಗೆ ಸಾಹೇಬರನ್ನು ಸೋಲಿಸಿ ಅಭಿವೃದ್ದಿಯನ್ನು ಕಳೆದುಕೊಂಡಿದ್ದೇವೆ. ಈ ಸಲ ಹಾಗಾಗಬಾರದು ನೀವೆಲ್ಲ ಸೇರಿ ರಾಧಾಕೃಷ್ಣ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ತಿಳಿ ಹೇಳಬೇಕು. ಒಂದು ಅವಕಾಶ ನೀಡಿ ಆರಿಸಿ ಕಳಿಸಿದರೇ, ನಿಮ್ಮೆಲ್ಲರ ಸೇವೆ ಮಾಡುತ್ತೇನೆ ಎಂದರು.
ಮಾಜಿ ಸಚಿವ ಬಾಬುರಾವ ಚಿಂಚನಸೂರು ಮಾತನಾಡಿ, ನನಗೆ ತಂದೆ- ತಾಯಿ- ಮಕ್ಕಳು ಯಾರೂ ಇಲ್ಲ. ಇರುವುದು ನಾನು ಹಾಗೂ ನನ್ನ ಹೆಂಡತಿ ಮಾತ್ರ. ಇದು ಬಿದ್ದು ಹೋಗುವ ಶರೀರ. ಸಾಯುವ ಮುನ್ನ ಕೋಲಿ ಸಮಾಜವನ್ನು ಎಸ್ ಟಿ ಗೆ ಸೇರಿಸಬೇಕು ಎನ್ನುವುದು ನನ್ನ ಆಸೆಯಾಗಿದೆ ಎಂದರು.
ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯಾಗಬೇಕಾದರೆ ನೀವೆಲ್ಲ ರಾಧಾಕೃಷ್ಣ ಅವರನ್ನು ಗೆಲ್ಲಿಸಬೇಕು. ಖರ್ಗೆ ಅವರು ಪ್ರಧಾನಿ ಆದರೆ, ಒಂದೇ ದಿನದಲ್ಲಿ ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸಲಿದ್ದಾರೆ. ನಂತರ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲು ನಾವು ನೀವೆಲ್ಲ ಸೇರಿ ಕೆಲಸ ಮಾಡಬೇಕು ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನ ಮಂತ್ರಿಯಾಗುವ ಯೋಗ ಒದಗಿ ಬಂದಿದೆ. ನೀವೆಲ್ಲ ರಾಧಾಕೃಷ್ಣ ಅವರಿಗೆ ಆರಿಸಿ ಕಳಿಸಿ ಎಂದು ಮನವಿ ಮಾಡಿದರು.
ಕೆಪಿಸಿಸಿ ಸದಸ್ಯರಾದ ನಾಗರೆಡ್ಡಿ ಪಾಟೀಲ ಮಾತನಾಡಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಜನಪರ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಮತ ನೀಡಿ ಎಂದರು.
ವೇದಿಕೆಯ ಮೇಲೆ ಮುಕ್ತಾರ ಪಟೇಲ, ಭೀಮಣ್ಣ ಸಾಲಿ, ರಾಜಗೋಪಾಲರೆಡ್ಡಿ, ಭಾಗನಗೌಡ ಸಂಕನೂರು ಸೇರಿದಂತೆ ಹಲವರಿದ್ದರು.