ಬೆಂಗಳೂರು: ಗ್ಯಾರಂಟಿಗಳನ್ನು ಈಡೇರಿಸಲು ಆಗದೆ ಸಂದಿಗ್ಧ ಪರಿಸ್ಥಿತಿಯಲ್ಲಿರುವ ರಾಜ್ಯದ ಕಾಂಗ್ರೆಸ್ ಸರಕಾರವು, ಇವತ್ತು ಪೆಟ್ರೋಲ್ ದರವನ್ನು ಪ್ರತಿ ಲೀಟರ್‍ಗೆ 3 ರೂ., ಡೀಸೆಲ್ ದರವನ್ನು 3.50 ರೂ. ಏರಿಸಿದೆ. ಈ ಮೂಲಕ ರಾಜ್ಯದ ಜನರ ಮೇಲೆ ಬರೆ ಹಾಕಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬರಗಾಲದಂಥ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಜನರ ಮೇಲೆ ಹೊರೆ ಹಾಕಿರುವುದು ಅಕ್ಷಮ್ಯ ಅಪರಾಧ. ಮುಖ್ಯಮಂತ್ರಿಗಳು ತಮ್ಮ ಭಂಡತನವನ್ನು ಬಿಟ್ಟು ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಮುಂದಿನ ಸೋಮವಾರ ಬಿಜೆಪಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ, ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಒಂದೆಡೆ ಸೋಲಿನ ಹತಾಶೆ ಇದ್ದರೆ, ಇನ್ನೊಂದೆಡೆ ರಾಜ್ಯದ ಹಣಕಾಸು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಭಂಡ ಸರಕಾರ ಮತ್ತು ಮುಖ್ಯಮಂತ್ರಿಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ. ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದು ಒಂದೆಡೆ ಹೇಳುತ್ತಾರೆ. ಇನ್ನೊಂದೆಡೆ ಪೆಟ್ರೋಲ್, ಡೀಸೆಲ್ ದರ ಏರಿಸಿದ್ದು, ಇದು ಹಣಕಾಸಿನ ಪರಿಸ್ಥಿತಿ ಹದಗೆಟ್ಟದ್ದನ್ನು ತಿಳಿಸುತ್ತದೆ. ರಾಜ್ಯ ಸರಕಾರವು ಅಧಿಕಾರಿಗಳು, ಸಿಬ್ಬಂದಿಗೆ ಸಂಬಳ ಕೊಡಲಾಗದ ಕೆಟ್ಟ ಸ್ಥಿತಿಯಲ್ಲಿದ್ದು ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ದರ ಏರಿಸಿದ್ದಾರೆ ಎಂದು ವಿವರಿಸಿದರು.
ಗ್ಯಾರಂಟಿಯಿಂದ 18-20 ಸಂಸದರ ಸ್ಥಾನಗಳನ್ನು ಗೆಲ್ಲುವುದಾಗಿ ಭ್ರಮೆಯಲ್ಲಿ ಕಾಂಗ್ರೆಸ್ ಪಕ್ಷ ಇತ್ತು. ಲೋಕಸಭಾ ಚುನಾವಣೆಯಲ್ಲಿ ದೇಶ, ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆ ಆಗಿದೆ. ಈ ಸಿಟ್ಟನ್ನು ರಾಜ್ಯದ ಜನರ ಮೇಲೆ ತೋರಿಸುತ್ತಿದ್ದಾರೆ. ಹಿಂದೆ ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಿದ್ದರು. ಇದರ ಬಗ್ಗೆ ನಾವು ವಿಧಾನಸಭೆ ಒಳಗೆ ಮತ್ತು ಹೊರಗಡೆ ಚರ್ಚೆ ಮಾಡಿದ್ದೇವೆ. ವಿದ್ಯುತ್ ದರವನ್ನೂ ಏರಿಸಿದ್ದರು ಎಂದು ತಿಳಿಸಿದರು.
ಕಾನೂನು ಪ್ರಕೋಷ್ಠ ಗಟ್ಟಿಗೊಳಿಸುತ್ತೇವೆ…
ನಮ್ಮ ಕಾರ್ಯಕರ್ತರಿಗೆ ಈ ಭಂಡ ಕಾಂಗ್ರೆಸ್ ಸರಕಾರದ ಕಿರುಕುಳ, ದೌರ್ಜನ್ಯವನ್ನು ಧೈರ್ಯದಿಂದ ಎದುರಿಸಲಿದ್ದೇವೆ. ಪ್ರತಿಯೊಂದು ಜಿಲ್ಲೆ, ತಾಲ್ಲೂಕು ಮತ್ತು ಮಂಡಲ ಮಟ್ಟದಲ್ಲಿ ನಮ್ಮ ಕಾನೂನು ಪ್ರಕೋಷ್ಠವನ್ನು ಗಟ್ಟಿಗೊಳಿಸಲಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಹತಾಶ ಸ್ಥಿತಿಯಲ್ಲಿದೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ರಾಜ್ಯದಲ್ಲಿ ಆಗಿರುವ ಹಿನ್ನಡೆಯ ಪರಿಣಾಮವಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ, ದಬ್ಬಾಳಿಕೆ ನಡೆಯುತ್ತಿದೆ. ವಿನಾಕಾರಣ ಎಫ್‍ಐಆರ್, ಪೊಲೀಸರಿಂದ ಕಿರುಕುಳ ದಿನೇದಿನೇ ಜಾಸ್ತಿ ಆಗುತ್ತಿದೆ. ಕಾರ್ಯಕರ್ತರಿಗೆ ಧೈರ್ಯ ತುಂಬುವುದು, ಕಾನೂನು ಪ್ರಕೋಷ್ಠವನ್ನು ಸದೃಢಗೊಳಿಸಲು ವಕೀಲ ಮಿತ್ರರ ಸಭೆ ನಡೆಸಲಾಗಿದೆ. ಯಾರೂ ಧೈರ್ಯಗೆಡುವ ಪ್ರಶ್ನೆ ಇಲ್ಲ ಎಂದರು.
ಭಂಡ ಸರಕಾರದ ವಿರುದ್ಧ ಹೋರಾಟ…
ಬೆಳಿಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವಾಲ್ಮೀಕಿ ಸಮಾಜದ ಮುಖಂಡರು ಮತ್ತು ಪಕ್ಷದ ಮುಖಂಡರು ಬಂದಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಭ್ರಷ್ಟಾಚಾರದ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಿದೆ. ರಾಜ್ಯ ಸರಕಾರವು ಕೆಲವು ಅಧಿಕಾರಿಗಳನ್ನು ಬಂಧಿಸಿ 10 ಕೋಟಿ ಸಿಕ್ಕಿದೆ, 3 ಕೋಟಿ ಸಿಕ್ಕಿದೆ ಎಂದು ತೇಪೆ ಹಚ್ಚಿ ಪ್ರಕರಣವನ್ನು ಸಂಪೂರ್ಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಸಚಿವರು ರಾಜೀನಾಮೆ ಕೊಟ್ಟಿದ್ದಾರೆ; 25 ಕೋಟಿ ವಾಪಸ್ ಬಂದಿದೆ ಎಂಬುದು ಪ್ರಶ್ನೆ ಅಲ್ಲ. ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣವನ್ನು ದೋಚಲಾಗಿದೆ. ಬಿಜೆಪಿ ಈ ಪ್ರಕರಣವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಿದೆ. ಈ ಸಮುದಾಯಕ್ಕೆ ಭ್ರಷ್ಟ ಕಾಂಗ್ರೆಸ್ಸಿನಿಂದ ಆಗಿರುವ ಅನ್ಯಾಯವನ್ನು ಹೋರಾಟದ ಮೂಲಕ ಸರಿಪಡಿಸಿ, ಸಂಪೂರ್ಣ ಹಣ ಬರಬೇಕು; ಆದ ಅನ್ಯಾಯ ಸರಿಪಡಿಸಬೇಕು. ಹಣಕಾಸು ಇಲಾಖೆಗೆ ಗೊತ್ತಾಗದೇ, ಮಾಹಿತಿ ಇಲ್ಲದೇ ಇಷ್ಟು ದೊಡ್ಡ ಹಗರಣ ಆಗಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
18ರಂದು ಈ ಸಂಬಂಧ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಭೆ ನಡೆಸಲಾಗುವುದು. 28ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಇದು ಭಂಡ ಸರಕಾರ. ಇದರ ವಿರುದ್ಧ ಹೋರಾಟವನ್ನು ಮುಂದೆ ತೆಗೆದುಕೊಂಡು ಹೋಗಲಿದ್ದೇವೆ ಎಂದು ಪ್ರಕಟಿಸಿದರು.
ಉದ್ಯೋಗ ವಾರ್ತೆ: ‘ಪ್ರವಾಸಿ ಮಾರ್ಗದರ್ಶಿ ಹುದ್ದೆ’ಗಳಿಗಾಗಿ ಅರ್ಜಿ ಆಹ್ವಾನ
ಪೆಟ್ರೋಲ್, ಡೀಸೆಲ್ ದರ ಏರಿಸುವ ಮೂಲಕ ಜನಸಾಮಾನ್ಯರಿಗೆ ಬರೆ ಎಳೆದ ಸರ್ಕಾರ: ಎಎಪಿ ಜಗದೀಶ್ ಆಕ್ರೋಶ
‘ಬೀಟ್ ಆ್ಯಪ್’ ಮೂಲಕ ‘ಸರ್ಕಾರಿ ಜಮೀನು’ ಒತ್ತುವರಿಯಾಗದಂತೆ ಕ್ರಮವಹಿಸಿ: ಸಚಿವ ಕೃಷ್ಣ ಭೈರೇಗೌಡ ಖಡಕ್ ಸೂಚನೆ