ಬೆಂಗಳೂರು: ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೇಂದ್ರ ಸರ್ಕಾರ 3 ತಿಂಗಳ ಕಾಲಮಿತಿ ವಿಧಿಸಿ ಒತ್ತಡ ಹೇರುತ್ತಿದ್ದರೆ, ರಾಜ್ಯ ಬಿಜೆಪಿ ನಾಯಕರು ಆ ಯೋಜನೆ ಅನುಷ್ಠಾನಗೊಳಿಸಲು ಅಡ್ಡಗಾಲು ಹಾಕುತ್ತಿದ್ದಾರೆ. ಈ ವಿಷಯವಾಗಿ ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಗೆ ಲಿಖಿತ ದೂರು ನೀಡುವುದಾಗಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ಧಿಗೋಷ್ಠಿ ನಡೆಸಿದ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹಾಗೂ ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್, ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ವಿಚಾರವಾಗಿ ಬಿಜೆಪಿ-ಜೆಡಿಎಸ್ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು.
“ಸ್ಮಾರ್ಟ್ ಮೀಟರ್‌ನಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸುವ ಮೂಲಕ ರಾಜ್ಯದ ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರದ ಯೋಜನೆ ರಾಜ್ಯದಲ್ಲಿ ಅನುಷ್ಠಾನಗೊಳ್ಳದಂತೆ ಬಿಜೆಪಿ ನಾಯಕರೇ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷ ತಕ್ಕ ಉತ್ತರ ಕೊಡುತ್ತದೆ. ಅಶ್ವತ್ಥ ನಾರಾಯಣ ಅವರ ಸುಳ್ಳು ಪ್ರಚಾರದ ವಿರುದ್ಧ ಕೆಪಿಸಿಸಿ ವತಿಯಿಂದ ಕೇಂದ್ರ ಇಂಧನ ಸಚಿವ ಖಟ್ಟರ್ ಅವರಿಗೆ ಪತ್ರ ಬರೆಯುವ ಮೂಲಕ ಲಿಖಿತ ದೂರನ್ನು ನೀಡಲಿದೆ,”ಎಂದು ರಮೇಶ್ ಬಾಬು ತಿಳಿಸಿದರು.
“ಡಾ.ಅಶ್ವತ್ಥನಾರಾಯಣ ಅವರು ಇಂಧನ ಇಲಾಖೆಯ ಮೇಲೆ ಮಾಡಿರುವ ಆರೋಪವನ್ನು ಎರಡು ದೃಷ್ಟಿಕೋನಗಳಲ್ಲಿ ನೋಡಬೇಕಾಗಿದೆ. ರಾಜ್ಯದಲ್ಲಿ ಬೇನಾಮಿ ವ್ಯವಹಾರಗಳಿಗೆ ಖ್ಯಾತಿ ಪಡೆದಿರುವ ಅವರು ಟೆಂಡರ್ ಪಡೆಯಲು ಪ್ರಯತ್ನಿಸಿದ್ದರಾ? ಅದು ಸಿಗದ ಕಾರಣಕ್ಕೆ ಆರೋಪ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಇದೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಈ ರಾಜ್ಯ ಕಂಡ ಯಶಸ್ವಿ ಸಚಿವರು. ಅಲ್ಪಸಂಖ್ಯಾತ ಸಮುದಾಯದ ನಾಯಕ ಜಾರ್ಜ್ ಅವರ ಮೇಲೆ ಬಿಜೆಪಿ ನಾಯಕರು ನಿರಂತರವಾಗಿ ಸುಳ್ಳು ಆರೋಪ ಮಾಡುತ್ತಿರುವುದೇಕೆ?,”ಎಂದು ಪ್ರಶ್ನಿಸಿದರು.
“ಅಶ್ವತ್ಥನಾರಾಯಣ ಅವರು ತಮ್ಮ ಊಹೆಗೆ ತಕ್ಕಂತೆ 900 ರೂ.ಗೆ ಸ್ಮಾರ್ಟ್ ಮೀಟರ್ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ಇದು ಕೇಂದ್ರ ಸರ್ಕಾರ ಪ್ರತಿ ಮೀಟರ್‌ಗೆ ನೀಡುವ ಸಬ್ಸಿಡಿ ಮೊತ್ತ. 27 ರಾಜ್ಯಗಳು ಈ ಸಬ್ಸಿಡಿ ಪಡೆದು ಸ್ಮಾರ್ಟ್ ಮೀಟರ್ ಅಳವಡಿಸುತ್ತಿವೆ. ಇದು ಮೀಟರ್ ಮೊತ್ತ ಅಲ್ಲ. ಸಬ್ಸಿಡಿ ಮೊತ್ತವನ್ನು ಮೀಟರ್ ಮೊತ್ತ ಎಂದು ಹೇಳಿ ಜನರ ಕಿವಿಗೆ ಚೆಂಡುಹೂ ಮುಡಿಸುವ ಪ್ರಯತ್ನ ಮಾಡುತ್ತಿದ್ದಾರೆ,”ಎಂದರು.
“ಕೇಂದ್ರ ಇಂಧನ ಪ್ರಾಧಿಕಾರದ ನಿರ್ದೇಶನದಂತೆ 2021-22 ನೇ ಸಾಲಿನಲ್ಲಿ ಆರ್‌ಡಿಎಸ್ (RDSS- Revamped Distribution Sector Scheme) ಯೋಜನೆ ರೂಪಿಸಿದ್ದು, ಕೇಂದ್ರದ ಇಂಧನ ಸಚಿವಾಲಯವು ಮಾರ್ಗಸೂಚಿ ಹೊರಡಿಸಿ, ವಿದ್ಯುತ್ ಸರಬರಾಜು ತಮ್ಮ ಸಬ್ಸಿಡಿ ಸೇರಿದಂತೆ ಎಲ್ಲಾ ಬಾಕಿಗಳನ್ನು ಪಾವತಿಸಿದ್ದರೆ ಸ್ಮಾರ್ಟ್ ಮೀಟರ್ ಅಳವಡಿಸಲು ಕೇಂದ್ರದಿಂದ ಪ್ರತಿ ಮೀಟರ್ಗೆ ಗರಿಷ್ಠ 900 ರೂ. ಅಥವಾ ಮೀಟರ್ ದರದ ಶೇ. 15ರಷ್ಟನ್ನು ಸಬ್ಸಿಡಿಯಾಗಿ ನೀಡುವುದಾಗಿ ಹೇಳಿತ್ತು. ಅದರಂತೆ ದೇಶದ ಇತರೆ ರಾಜ್ಯಗಳು ಯೋಜನೆಯಡಿ, ಏಕಕಾಲದಲ್ಲಿ ಎಲ್ಲಾ ಗ್ರಾಹಕರ ಸ್ಥಾಪನಗಳಿಗೂ ಸ್ಮಾರ್ಟ್ ಮೀಟರ್ ಅಳವಡಿಸಿದ್ದವು. ಆದರೆ, ನಮ್ಮ ರಾಜ್ಯ ಆಗ ಯೋಜನೆ ಅಳವಡಿಸಿಕೊಂಡಿರಲಿಲ್ಲ. ಬಿಜೆಪಿ ಸರ್ಕಾರ ತಮ್ಮ ಅವಧಿಯಲ್ಲಿ ಕೇಂದ್ರಕ್ಕೆ ಪತ್ರ ಬರೆದು ಆರ್ ಡಿಎಸ್ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅದನ್ನು ಮಾಡಿದರೆ ರೈತರಿಗೆ ವಾರ್ಷಿಕವಾಗಿ ನೀಡುತ್ತಿರುವ ಉಚಿತ ವಿದ್ಯುತ್ ಯೋಜನೆಯನ್ನು ನಿಲ್ಲಿಸಬೇಕಾಗುತ್ತದೆ ಎಂದು ಕೇಂದ್ರಕ್ಕೆ ಕಾರಣ ತಿಳಿಸಿತ್ತು. ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಲ್ಲದ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿಯರವೇ ಉತ್ತರಿಸಬೇಕು,”ಎಂದರು.
“ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು 2024ರ ಫೆಬ್ರವರಿ 6 ಮತ್ತು ಮಾರ್ಚ್ 6ರಂದು ಹೊರಡಿಸಿದ್ದ ನಿಯಮಾವಳಿ ಪ್ರಕಾರ ರಾಜ್ಯದಲ್ಲಿ ಎಲ್ಲ ತಾತ್ಕಾಲಿಕ ಸ್ಥಾಪನಗಳು ಹಾಗೂ ಹೊಸ ಸ್ಥಾಪನಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಸೂಚಿಸಿತ್ತು. ಅದರಂತೆ ಕೆಟಿಪಿಪಿ ಕಾಯ್ದೆ ಅನುಸಾರ 2024ರ ಸೆಪ್ಟೆಂಬರ್ 26ರಂದು ಟೆಂಡರ್ ಕರೆಯಲಾಗಿತ್ತು. ಸ್ಮಾರ್ಟ್‌ಮೀಟರ್ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ಈ ಬಗ್ಗೆ ಇಂಧನ ಸಚಿವರು ಸ್ಪಷ್ಟಪಡಿಸಿದ್ದಾರೆ,”ಎಂದು ರಮೇಶ್ ಬಾಬು ತಿಳಿಸಿದರು.
BREAKING: ಮರ ಬಿದ್ದು ಸೊರಬ-ಸಾಗರ ರಸ್ತೆ ಸಂಚಾರ ಬಂದ್: ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ
ಹರಿಯಾಣದ ನಂತರ ಕೇರಳದಲ್ಲಿ ಒಂದೇ ಕುಟುಂಬ ನಾಲ್ವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಆತ್ಮಹತ್ಯೆ ಶಂಕೆ
BIG NEWS : ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಉಚ್ಚಾಟನೆ ಮಾಡಲಾಗಿದೆ : ಬಿವೈ ವಿಜಯೇಂದ್ರ ಫಸ್ಟ್ ರಿಯಾಕ್ಷನ್