ಬಳ್ಳಾರಿ: ಜಿಲ್ಲೆಯಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದಂತ ರಾಜಶೇಖರ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಇತರೆ ಮುಖಂಡರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಅಲ್ಲದೇ ಬಿಜೆಪಿ ಪಕ್ಷದಿಂದ ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ರಾಜಶೇಖರ ಅವರದ್ದು ಸ್ಪಷ್ಟವಾದ ಕೊಲೆ. ಕಾಂಗ್ರೆಸ್ ಪಕ್ಷದವರೇ ಗುಂಡು ಹಾರಿಸಿ ಕೊಂದಿದ್ದಾರೆ. ಈ ಕುಟುಂಬ ಬಡತನದಲ್ಲಿದ್ದು, ನಾವು ಎಲ್ಲರೂ ಅವರ ನೋವಿಗೆ ಸ್ಪಂದಿಸಲು ಬಂದಿದ್ದೇವೆ ಎಂದರು.
ಸಿಎಂ ಸಿದ್ಧರಾಮಯ್ಯ ಅವರು ಈ ವಿಚಾರವನ್ನು ತಮಾಷೆಯಾಗಿ ನೋಡದೇ ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕರಣದ ಸತ್ಯಾಸತ್ಯತೆ ಹೊರ ಬರೋದಕ್ಕೆ ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದರು.
ನಾವು ಇವತ್ತು ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ- ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಜನಾರ್ಧನ ರೆಡ್ಡಿ, ಪ್ರಮುಖರು ಸೇರಿ ಬಡ ಕುಟುಂಬದವರನ್ನು ಭೇಟಿ ಮಾಡಿದ್ದೇವೆ. ಅವರ ತಾಯಿಯನ್ನೂ ಭೇಟಿ ಮಾಡಿದ್ದೇವೆ. ಅವರಿಗೆ 10 ಲಕ್ಷ ಪರಿಹಾರ ಕೊಟ್ಟಿದ್ದೇವೆ ಎಂದರು. ಆದರೆ, ಯಾವುದೇ ಪರಿಹಾರದಿಂದ ನ್ಯಾಯ ಕೊಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಬಿ.ಶ್ರೀರಾಮುಲು ಅವರು ಮಾತನಾಡಿ, ರಾಜಶೇಖರರ ಸಾವಿನ ಸಂದರ್ಭದಲ್ಲಿ ಅನೇಕ ಜನರಲ್ಲಿ ಗೊಂದಲ ಇತ್ತು. ಬಿಜೆಪಿಯವರಿಂದ ಕೊಲೆ ಆಗಿದೆ ಎಂದು ತಿಳಿಸುವ ಕೆಲಸ ಮಾಡಿದ್ದರು. ಈ ಕೊಲೆ ಕಾಂಗ್ರೆಸ್ಸಿನವರಿಂದಲೇ ಆಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದ ಎಲ್ಲ ವಿಡಿಯೋಗಳನ್ನು ನಾವು ಕೊಟ್ಟಿದ್ದೇವೆ ಎಂದು ತಿಳಿಸಿದರು.
ಸಾವು ಯಾರಿಂದ ಎಂಬ ವಿಷಯದಲ್ಲಿ ಗೊಂದಲ ಇದ್ದ ಕಾರಣ ಕೂಡಲೇ ಇಲ್ಲಿ ಬಂದಿರಲಿಲ್ಲ. ಇದೀಗ ಪರಿಹಾರದ ಹಣವನ್ನು ಚೆಕ್ ಮೂಲಕ ಮೃತರ ತಾಯಿಗೆ ಕೊಡಲಾಗಿದೆ ಎಂದು ವಿವರಿಸಿದರು.
BREAKING: ಮಾಜಿ ಸಚಿವ ರಾಜೂಗೌಡ ಕಾರ್ ಅಪಘಾತ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
BIG NEWS: ಅಕ್ರಮ ಮರಳು ಸಾಗಾಟದ ವಿರುದ್ಧ ದೂರು ನೀಡಿದ ವಕೀಲನನ್ನು ಕೊಲೆಗೆ ಯತ್ನ, ಐವರು ಅರೆಸ್ಟ್








