ಮಂಡ್ಯ : ದೇಶದಲ್ಲಿ ಮತಾಂತರಕ್ಕೆ ಬಿಜೆಪಿ ನಾಯಕರೇ ನೇರ ಕಾರಣರಾಗುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಕಿಡಿಕಾರಿದರು.
ಮದ್ದೂರು ತಾಲೂಕಿನ ನೀಲಕಂಠನಹಳ್ಳಿ, ಕೆ.ಹಾಗಲಹಳ್ಳಿ ಹಾಗೂ ಭೀಮನಕೆರೆ ಗ್ರಾಮಗಳಲ್ಲಿ ಶನಿವಾರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದೆ ಗ್ರಾಮಗಳಲ್ಲಿ ಸರ್ವ ಧರ್ಮದವರೆಲ್ಲ ಸೇರಿ ಅನ್ಯೋನ್ಯತೆ ಹಾಗೂ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದರು. ಆದರೆ ಈಗ ಜಾತಿಗಳನ್ನು ಗುರುತಿಸುವ ಮೂಲಕ ಇವರು ಇಂತಹ ಜಾತಿ, ಇಂತಹ ಪಂಗಡದವರು ಸೀಮಿತವಾಗಿದ್ದಾರೆ ಎಂದು ದೇಶದಲ್ಲಿ ಬಿಜೆಪಿಯವರು ವಿಷ ಬೀಜ ಬಿತ್ತುವ ಮೂಲಕ ಅನಗತ್ಯವಾಗಿ ಜಾತೀಯತೆ ಸೃಷ್ಟಿಸುತ್ತಿರುವ ಪರಿಣಾಮವೇ ದೇಶದಲ್ಲಿ ಮತಾಂತರಕ್ಕೆ ಬಿಜೆಪಿ ನಾಯಕರೇ ನೇರ ಕಾರಣರಾಗುತ್ತಿದ್ದಾರೆ ಎಂದು ಶಾಸಕ ಉದಯ್ ಕಿಡಿಕಾರಿದರು.
ಇನ್ನು ದಸರಾ ಉದ್ಘಾಟನೆಯ ಅಪಸ್ವರದ ಬಗ್ಗೆ ಮಾತನಾಡಿ, ಭಾನು ಮುಷ್ತಾಕ್ ಅವರು ಭಾರತದ ಪ್ರಜೆ, ಸಣ್ಣ ಸಣ್ಣ ವಿಚಾರಗಳಿಗೂ ಜಾತಿ, ಧರ್ಮ ತರುವುದು ಸರಿಯಲ್ಲ. ದೇವಾಲಯಗಳಿಗೆ ಯಾರು ಬೇಕಾದರೂ ಹೋಗಬಹುದು. ನಮ್ಮನ್ನು ಕೂಡ ಪ್ರೀತಿಯಿಂದ ಹಬ್ಬ ಹಾಗೂ ಸಮಾರಂಭಗಳಿಗೆ ಬಾಂಧವರು ಚರ್ಚ್, ಮಸೀದಿಗೆ ಆಹ್ವಾನ ಮಾಡ್ತಾರೆ ನಾವು ಹಾಗಂತ ನಮ್ಮ ಧರ್ಮ ಬದಲಾಗಲ್ಲ. ಭಾನು ಮುಷ್ತಾಕ್ ಅವರು ಒಬ್ಬ ಸಾಧಕಿ. ಅವರನ್ನು ನಮ್ಮ ಸರ್ಕಾರ ಗೌರವಯುತವಾಗಿ ದಸರಾ ಉದ್ಘಾಟನೆಗೆ ಘೋಷಣೆ ಮಾಡಿದೆ. ಹೀಗಾಗಿ ಈ ವಿಚಾರದಲ್ಲೂ ಜಾತೀಯತೆ ತರುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸುದ್ದಿಗೊಷ್ಠಿ ನಡೆಸಿ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಪ್ರಕರಣವನ್ನು ಎನ್ಐಎ ಗೆ ವಹಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.
ಈ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕ ಉದಯ್ ಧರ್ಮಸ್ಥಳ ಪ್ರಕರಣವನ್ನು ಎನ್ಐಎ ಗೆ ವಹಿಸುವ ಅಗತ್ಯವಿಲ್ಲ ನಮ್ಮ ಕರ್ನಾಟಕ ಪೋಲೀಸರೇ ಸಮರ್ಥರಿದ್ದಾರೆ. ಕೇಂದ್ರದ ತನಿಖಾ ಸಂಸ್ಥೆಗಳಿಗೆ ವಹಿಸಿದರೇ ಏನು ತನಿಖೆ ಮಾಡುತ್ತಿದ್ದಾರೆ ಎಂಬ ಮಾಹಿತಿಯೇ ಸಿಗಲ್ಲ. ಆದರೆ, ನಮ್ಮ ಪೋಲೀಸರು ನಡೆಸುವ ತನಿಖೆಯ ಮಾಹಿತಿ ಆಗಾಗ್ಗೆ ಸಿಗುತ್ತೆ. ರಾಜ್ಯದ ಪೋಲೀಸರು ಎಂತೆಂಥ ಕಠಿಣವಾದ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಹೀಗಾಗಿ ನಮ್ಮ ಪೋಲೀಸರ ತನಿಖೆಗೆ ಬಗ್ಗೆ ನಮಗೆ ನೂರಕ್ಕೂ ನೂರರಷ್ಟು ವಿಶ್ವಾಸವಿದೆ ಎಂದು ನಿಖಿಲ್ ಕುಮಾರಸ್ವಾಮಿಗೆ ಟಾಂಗ್ ನೀಡಿದರು.
ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ್, ಗ್ರಾ.ಪಂ ಅಧ್ಯಕ್ಷ ಕೆಂಪರಾಜು, ಗ್ರಾ.ಪಂ ಸದಸ್ಯ ಮಾದೇಶ್,
ಸಹಕಾರ ಸಂಘಗಳ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಸಿ.ರಾಜು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎನ್.ಡಿ.ರಾಜು, ಮುಖಂಡರಾದ ಎನ್.ಕೆ.ಜಗದೀಶ್, ಯತೀಶ್ ಕುಮಾರ್, ಪುಟ್ಟರಾಮು, ಸುರೇಶ್ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ