ಮಂಡ್ಯ :- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರು ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರವನ್ನು ಖಂಡಿಸಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ವತಿಯಿಂದ ಮದ್ದೂರು ಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಸ್ತೆ ಸಂಚಾರ ತಡೆದು ಭಾನುವಾರ ಬೃಹತ್ ಪ್ರತಿಭಟನೆ ಮಾಡಲಾಯಿತು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಪ್ರತಿಕೃತಿ ದಹಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ, ಹೆದ್ದಾರಿ ಸಂಚಾರ ತಡೆದ ಪರಿಣಾಮ ಕೆಲಕಾಲ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿತ್ತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಮಾತನಾಡಿ, ಪೆನ್ ಡ್ರೈವ್ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಅಣಿಯಲು ಕಾಂಗ್ರೆಸ್ ಪಕ್ಷದ ನಾಯಕರು ಮುಂದಾಗಿರುವುದು ಸರಿಯಲ್ಲ.
ಕಾಂಗ್ರೆಸ್ ಪಕ್ಷದ ನಾಯಕರು ನಾಲಿಗೆ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಇದ್ದಿದ್ದರೆ ಪೆನ್ ಡ್ರೈವ್ ಹಂಚಿದವರನ್ನು ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರ ಬಗ್ಗೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಗೌರವಸ್ಥರ ಕುಟುಂಬದ ಹೆಣ್ಣು ಮಕ್ಕಳನ್ನು ಸಾಮಾಜಿಕ ಜಾಲತಾಣದ ಮೂಲಕ ಬೀದಿಗೆ ಬರುವಂತೆ ಮಾಡಿರುವ ಕಾಂಗ್ರೆಸ್ ಮುಖಂಡರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣವನ್ನುಎಸ್.ಐ.ಟಿ ಗೆ ವಹಿಸಿದ್ದು, ಅಲ್ಲಿನ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಣತಿಯಂತೆ ತನಿಖೆ ನಡೆಸುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಈ ಕೂಡಲೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಒಂದು ವೇಳೆ ತಪ್ಪು ಮಾಡಿದ್ದರೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ಅವರನ್ನು ಗಲ್ಲಿಗೆರಿಸಲಿ ನಮ್ಮ ಅಭ್ಯಂತರವಿಲ್ಲ. ಆದರೆ ಈ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಂಡು ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ತೊಂದರೆ ಕೊಡುವುದನ್ನು ನಾವು ಸಹಿಸಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಡಿ.ಕೆ. ಶಿವಕುಮಾರ್ ಅವರ ಆಡಿಯೋ ತುಣುಕುಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು ರಾತ್ರೋರಾತ್ರಿ ಯಾಕೆ ಬಂಧಿಸಿದರು. ಇಂತಹ ಹಿಟ್ಲರ್ ಸರ್ಕಾರವನ್ನು ಹಿಂದೆದೂ ನೋಡಿರಲಿಲ್ಲ. ಪ್ರಜಾಪ್ರಭುತ್ವ ಉಳಿಯಬೇಕು ಎಂಬ ದೃಷ್ಟಿಯಿಂದ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ಬೆಂಗಳೂರಿನ ಪೊಲೀಸ್ ಠಾಣೆಗಳಿಗೆ ಹೋದರೆ ಕಾಂಗ್ರೆಸ್ ಶಾಸಕ ಕೆ.ಎಂ. ಉದಯ್ ಚರಿತ್ರೆ ಬಟ ಬಯಲಾಗುತ್ತದೆ. ಯಾರ ಚರಿತ್ರೆ ಏನು ಎಂದು ಎಲ್ಲರಿಗೂ ಗೊತ್ತಿದೆ. ಯಾರು ಹೆಣ್ಣು ಮಕ್ಕಳಿಗೆ ಎಷ್ಟೋ ಗೌರವ ಕೊಟ್ಟಿದ್ದಾರೆ ಎಂಬುವುದು ತಿಳಿದಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂಥ ಚಿಲ್ಲರೆ ರಾಜಕಾರಣಿಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇಂಥವರನ್ನು ಇಟ್ಟುಕೊಂಡು ರಾಜಕಾರಣ ಮಾಡುವ ಡಿ.ಕೆ ಶಿವಕುಮಾರ್ ಅವರು ಸಜ್ಜನರೇನ್ರಿ ಎಂದು ಡಿ.ಸಿ.ತಮ್ಮಣ್ಣ ಪ್ರಶ್ನಿಸಿದರು.
ಇಂಥಹ ವ್ಯಕ್ತಿಗಳು ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ, ಪುರಸಭಾ ಸದಸ್ಯರಾದ ಎಂ.ಐ.ಪವೀಣ್, ಪ್ರಿಯಾಂಕ ಅಪ್ಪುಗೌಡ, ಎಸ್.ಮಹೇಶ್, ವನಿತಾ, ಪ್ರಮೀಳ, ಸುರೇಶ್ ಕುಮಾರ್, ಗ್ರಾಪಂ ಸದಸ್ಯೆ ನಳಿನಾ, ತಾಪಂ ಮಾಜಿ ಅಧ್ಯಕ್ಷ ಜಿ.ಪಿ.ಯೋಗೇಶ್, ಮುಖಂಡರಾದ ರವಿ ಚನ್ನಸಂದ್ರ, ಗೆಜ್ಜಲಗೆರೆ ಯೋಗೇಶ್, ಅಪ್ಪುಪಿ.ಗೌಡ, ಬ್ಯಾಡರಹಳ್ಳಿ ರಾಮಕೃಷ್ಣ , ರಮೇಶ್, ಹೊನ್ನೇಗೌಡ, ಲಿಂಗಯ್ಯ, ಮಲ್ಲರಾಜು, ವೀರಪ್ಪ ಸೇರಿದಂತೆ ಇತರರು ಇದ್ದರು.
ವರದಿ: ಗಿರೀಶ್ ರಾಜ್, ಮಂಡ್ಯ
BIG NEWS: ರಸ್ತೆಯಲ್ಲಿ ಸಿಕ್ಕ ಪೆನ್‌ಡ್ರೈವ್ ಎ.ಮಂಜುಗೆ ಕೊಟ್ಟಿದ್ದೆ: ಹೊಸ ಬಾಂಬ್ ಸಿಡಿಸಿದ ಆರೋಪಿ ನವೀನ್‌ಗೌಡ!