ಮೈಸೂರು : ಕರ್ನಾಟಕದಲ್ಲಿ ಸೋಲಿನ ಭಯದಿಂದ ಬಿಜೆಪಿ- ಜೆಡಿಎಸ್ ಒಂದಾಗಿದೆ. ಈ ಅಪವಿತ್ರ ಮೈತ್ರಿಯನ್ನು ನಾಡಿನ ಜನತೆ ತಿರಸ್ಕರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ನಗರದಲ್ಲಿ ಆಯೋಜಿಸಿದ್ದ, ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸಿದ್ದಾಂತವನ್ನು ಒಪ್ಪಿ ಯಾವುದೇ ಷರತ್ತು ವಿಧಿಸದೇ ಕಾಂಗ್ರೆಸ್ ಸೇರಿದವರನ್ನು ಕಾಂಗ್ರೆಸ್ ಸದಾ ಸ್ವಾಗತಿಸುತ್ತದೆ. ಸ್ಥಾನಮಾನಕ್ಕಾಗಿ ಅಲ್ಲದೇ ಬಿಜೆಪಿಯಲ್ಲಿ ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ ಹಾಗೂ ಕಾಂಗ್ರೆಸ್ ಪಕ್ಷ ಬಡವರ ಪರವಾಗಿದೆ ಎಂಬ ಕಾರಣಕ್ಕಾಗಿ ಹಲವರು ಇಂದು ಕಾಂಗ್ರೆಸ್ ಸೇರಿದ್ದಾರೆ. ಅವರೆಲ್ಲರನ್ನೂ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡಿದ್ದೇನೆ ಎಂದರು.
ರಾಜಕೀಯ, ಸಾಮಾಜಿಕ ಕೇತ್ರದಲ್ಲಿ ಮೂರು ದಶಕಗಳಿಂದ ತೊಡಗಿಸಿಕೊಂಡಿರುವ ರಾಜೀವ್ ಅವರು ಕಾಂಗ್ರೆಸ್ಸಿನ ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಯಾಗಿರುವುದು ಒಳ್ಳೆಯ ಬೆಳವಣಿಗೆ ಹಾಗೂ ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ಸೇರ್ಪಡೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ರಾಜೀವ್ ಮತ್ತು ಇತರೆ ಎಲ್ಲಾ ಮುಖಂಡರ ಸೇರ್ಪಡೆಯಿಂದಾಗಿ ಶಕ್ತಿ ಬಂದಂತಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜೀವ್ ಅವರು ಸೇರಿರುವುದರಿಂದ ಕೃಷ್ಣರಾಜ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಲಕ್ಷ್ಮಣ್ ಹೆಚ್ಚು ಮತ ಪಡೆಯುವ ವಿಶ್ವಾಸವಿದೆ. ಇಂದು ಸೇರ್ಪಡೆಯಾದವರು ಸೇರಿದಂತೆ ಕಾಂಗ್ರೆಸ್ ನ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಭಿನ್ನಾಭಿಪ್ರಾಯಗಳನ್ನು ಮರೆತು ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕೆಂಬ ಗುರಿಯೊಂದಿಗೆ ಕೆಲಸ ಮಾಡಬೇಕು. ಈ ಕ್ಷೇತ್ರದಲ್ಲಿ ಬಡವರಿದ್ದಾರೆ. ಯಾವುದೇ ಜಾತಿ, ಧರ್ಮ ಅಥವಾ ಪಕ್ಷದ ಆಧಾರದ ಮೇಲೆ ಕಾಂಗ್ರೆಸ್ ಬಡವರನ್ನು ಕಡೆಗಣಿಸಿಲ್ಲ ಎಂದು ಹೇಳಿದರು.
ಬಿಜೆಪಿಯವರು “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎಂದು ಹೇಳುತ್ತಾರೆ. ಬುರ್ಖಾ, ಗಡ್ಡ, ಶಿಲುಬೆ ಹಾಕಿದವರು ಬರಬಾರದು ಎನ್ನುತ್ತಾರೆ. ಇದು ಯಾವ ರೀತಿಯ ಸಬ್ ಕಾ ಸಾಥ್? ಸುಳ್ಳು ಬಿಜೆಪಿಯ ಮನೆದೇವರು. 15 ಲಕ್ಷ ಪ್ರತಿ ಕುಟುಂಬದ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಿದ್ದರು. ಅಚ್ಚೇ ದಿನ್ ಬರುತ್ತದೆ ಎಂದರು. ಬಂತೇ? ಗ್ಯಾಸ್, ಗೊಬ್ಬರದ ಬೆಲೆ ಏರಿಸಿದರು. ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ ಎಂದರು.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಜನಸಾಮಾನ್ಯರ ಬದುಕಿಗೆ ಅನುಕೂಲವಾಗುವಂತೆ ಏನೂ ಮಾಡಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ, ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗೆ ಕೊಂಡೊಯ್ಯುತ್ತೇನೆ ಎಂದರು. ಆಗಿದೆಯೇ? ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದವರಿಗೆ ಇಂದಿನವರೆಗೆ ಮಾಡಲಾಗಿಲ್ಲ. ನರೇಂದ್ರ ಮೋದಿಯವರು ನುಡಿದಂತೆ ನಡೆದಿಲ್ಲ. ಇಷ್ಟೆಲ್ಲಾ ಅನ್ಯಾಯ ಮಾಡಿದ ಬಿಜೆಪಿಗೆ ಯಾಕೆ ಮತ ಹಾಕಬೇಕು? ಎಂದು ಪ್ರಶ್ನಿಸಿದರು.
ನಮ್ಮ ಕಾರ್ಯಕರ್ತರಿಗೆ ನಾವು ಮಾಡಿರುವ ಕೆಲಸವನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಮತ್ತು ಜನರಿಗೆ ಸುಳ್ಳು ಹೇಳಬೇಡಿ ಎಂದು ಹೇಳಿದ್ದೇನೆ. ಹಿಂದಿನ ಬಾರಿ ನಮ್ಮ ಸರ್ಕಾರ 168 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿತ್ತು. ಹಾಗಾಗಿ ನುಡಿದಂತೆ ನಡೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇವೆ ಎಂದಿದ್ದಾರೆ.