ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸಮ್ಮಿಲನದಿಂದ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡತಕ್ಕ ಫಲಿತಾಂಶವನ್ನು ನೀಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ಇಂದು ನಡೆದ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, 2006ರಲ್ಲಿ ಸಹ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ಆಗಿತ್ತು. ಆದರೆ, ಸೈದ್ಧಾಂತಿಕ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಜೀ ಅವರ ಸಮ್ಮತಿ ಇರಲಿಲ್ಲ ಎಂದು ನೆನಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಜೀ ಅವರ ಜೊತೆಜೊತೆಗೇ ಮಾನ್ಯ ದೇವೇಗೌಡ ಜೀ ಅವರೂ ಈ ಬಾರಿ ಸಮ್ಮಿಲನಕ್ಕೆ ಆಶೀರ್ವಾದ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೀ ಅವರು ಈ ದೇಶದ ಅಭಿವೃದ್ಧಿ, ಭದ್ರತೆ ದೃಷ್ಟಿಯಿಂದ ನಮಗೆ ಆಶೀರ್ವಾದ ಮಾಡಿದ್ದು, ಇದರಿಂದ ಆನೆ ಬಲ ಬಂದಂತಾಗಿದೆ. ರಾಜ್ಯಕ್ಕೂ ಮುಂದಿನ ದಿನಗಳಲ್ಲಿ ಒಳಿತಾಗಲಿದೆ ಎಂದು ವಿಶ್ವಾಸದಿಂದ ನುಡಿದರು.
ಬಿಜೆಪಿ ಮತ್ತು ಜೆಡಿಎಸ್ ಜೊತೆಗೂಡಿ ಕೆಲಸ ಮಾಡಲು ಒಪ್ಪಿಕೊಂಡು ಹಲವು ತಿಂಗಳೇ ಕಳೆದಿದೆ. ನಾನು ಕೂಡ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆಗೆ ಮೈಸೂರು- ಕೊಡಗು, ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ಜಂಟಿ ಪ್ರವಾಸ ಮಾಡಿದ್ದೇನೆ. ಇದರ ಪರಿಣಾಮವಾಗಿ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ತಲುಪಿದೆ. ಕರ್ನಾಟಕದಲ್ಲಿ ಸಾಕಷ್ಟು ಹೊಂದಾಣಿಕೆ ರಾಜಕಾರಣ ನಡೆದಿದೆ. ಬಿಜೆಪಿ ಮತ್ತು ಜೆಡಿಎಸ್, ಜೆಡಿಎಸ್-ಕಾಂಗ್ರೆಸ್ ನಡುವೆ ಹಲವಾರು ಬಾರಿ ಹೊಂದಾಣಿಕೆ ಆಗಿದೆ. ಆದರೆ, ಈಗ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಗೆ ರಾಜ್ಯದ ಪ್ರಜ್ಞಾವಂತ ಮತದಾರರು ಸಂಪೂರ್ಣ ಆಶೀರ್ವಾದ ಕೊಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಮೈಸೂರು, ಮಂಡ್ಯದಲ್ಲಿ ಕಾರ್ಯಕರ್ತರ ಉತ್ಸಾಹ ಗಮನಿಸಿದ್ದೇನೆ. ತಳಮಟ್ಟದಲ್ಲೂ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನುಡಿದ ಅವರು, ಈ ಚುನಾವಣೆಯಲ್ಲಿ ಎರಡೂ ಪಕ್ಷಗಳ ಮುಖಂಡರ ಜವಾಬ್ದಾರಿ ಹೆಚ್ಚಾಗಿದೆ. ಈ ಸಮ್ಮಿಲನವನ್ನು ಜನರು ಗಂಭೀರವಾಗಿ ಪರಿಗಣಿಸಿದ್ದಾರೆ. ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ವಿಶ್ವಾಸದಿಂದ ದುಡಿದು ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ ಎಂದು ಮನವಿ ಮಾಡಿದರು.
2018ರಲ್ಲಿ ನಾವು- ನೀವು ಮೈತ್ರಿ ಸರಕಾರ ಮಾಡಿದ್ದರೆ- ಎಚ್‍ಡಿಕೆ
ಬಿಜೆಪಿ ಸ್ನೇಹಿತರು ನಮ್ಮನ್ನು ಆತ್ಮೀಯವಾಗಿ ಕಂಡಿದ್ದಾರೆ. 2006ರಲ್ಲಿ ಅನಿವಾರ್ಯ ಕಾರಣಗಳಿಂದ ಮೈತ್ರಿ ಸರಕಾರ ದೀರ್ಘ ಕಾಲ ಮುಂದುವರೆಯಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. ಬಳಿಕ 2018ರಲ್ಲಿ ನಾವು- ನೀವು ಮೈತ್ರಿ ಸರಕಾರ ಮಾಡಿದ್ದರೆ ಇವತ್ತು ಸಹ ನಮ್ಮ ಸರಕಾರವೇ ಇರುತ್ತಿತ್ತೇನೋ ಎಂದು ಅಭಿಪ್ರಾಯಪಟ್ಟರು. ಈ ಹಿಂದೆ ನಡೆದುದೆಲ್ಲ ವಿಧಿಯ ಆಟಗಳು ಎಂದು ಅವರು ಹೇಳಿದರು.
ಇವತ್ತು ಕಳೆದ ವಿಧಾನಸಭೆ ಚುನಾವಣೆ ಬಳಿಕ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಸ್ವಲ್ಪ ನಿರಾಶೆ ಉಂಟಾಗಿದೆ. ಯಾಕೆ ಹೀಗಾಗಿದೆ? ನಮ್ಮಲ್ಲಿನ ಒಳಜಗಳ, ವಿಶ್ವಾಸದ ಕೊರತೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಎಂಬ ಚರ್ಚೆಗಳು ಮುಖಂಡರಲ್ಲಿ ನಡೆದಿವೆ. ನಂತರ ಬಿಜೆಪಿ ಶಕ್ತಿ ವೃದ್ಧಿ, ಪ್ರಧಾನಿಯವರ ನಿಸ್ವಾರ್ಥ ಸೇವೆ, ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕುವ ದೃಷ್ಟಿಯಿಂದ ಹಿರಿಯ ನಾಯಕ ಅಮಿತ್ ಶಾ ಅವರ ಆಹ್ವಾನದ ಮೇರೆಗೆ ಅವರನ್ನು ಭೇಟಿ ಮಾಡಿದೆ. ಬಳಿಕ ಪರಸ್ಪರ ಮೈತ್ರಿಯ ಹೊಂದಾಣಿಕೆ ಆಗಿದೆ ಎಂದು ತಿಳಿಸಿದರು.
ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಲೋಕಸಭಾ ಚುನಾವಣೆಯ ರಾಜ್ಯ ಉಸ್ತುವಾರಿ ರಾಧಾಮೋಹನ್‍ದಾಸ್ ಅಗರವಾಲ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯದ ಮಾಜಿ ಸಚಿವ ಜಿ.ಟಿ. ದೇವೇಗೌಡ, ಎರಡೂ ಪಕ್ಷಗಳ ಆಹ್ವಾನಿತ ಮುಖಂಡರು ಭಾಗವಹಿಸಿದ್ದರು.
BIG NEWS : ಅಶ್ಲೀಲ ಪದಗಳಿಂದ ಸಚಿವ ಶಿವರಾಜ್ ತಂಗಡಗಿಗೆ ನಿಂದನೆ ಆರೋಪ : ಸಿಟಿ ರವಿ ವಿರುದ್ಧ ದೂರು ದಾಖಲು
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು- ಪ್ರತಿಪಕ್ಷ ನಾಯಕ ಆರ್.ಅಶೋಕ್