ಶಿವಮೊಗ್ಗ : ಬಿಜೆಪಿಯವರು ಅತ್ಯಂತ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಅನುದಾನದ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿ ಚಿಲ್ಲರೆ ರಾಜಕಾರಣ ಮಡುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಜೋಸೆಫ್ ನಗರದಲ್ಲಿ ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದಂತ ಅವರು, ನಗರವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ರಸ್ತೆ ಕಾಮಗಾರಿಗಳು ನಡೆಯುತ್ತಿದೆ. ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ವಿಶೇಷ ಅನುದಾನ ತಂದಿದ್ದೇನೆ. ಹಣ ಬಂದಿಲ್ಲ ಎಂದು ಬಿಜೆಪಿಯವರು ಬೊಗಳೆ ಬಿಡುತ್ತಿದ್ದಾರೆ. ಯಾರು ಶಾಸಕರು ಇರುತ್ತಾರೋ ಅವರ ಅವಧಿಯಲ್ಲಿ ಒಂದಷ್ಟು ಅನುದಾನ ಬಿಡುಗಡೆಯಾಗಿರುತ್ತದೆ. ಅವರ ನಂತರ ಬರುವ ಮತ್ತೊಬ್ಬ ಶಾಸಕರು ಅದನ್ನು ವಿನಿಯೋಗ ಮಾಡುತ್ತಾರೆ. ಕಾಗೋಡು ತಿಮ್ಮಪ್ಪ ಅವರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಆಡಳಿತ ಸೌಧವನ್ನು ಹಾಲಪ್ಪ ಶಾಸಕರಾಗಿದ್ದಾಗ ಉದ್ಘಾಟನೆ ಮಾಡಿದ್ದಾರೆ. ಅವರ ಅವಧಿಯಲ್ಲಿ ಉಳಿದ ಸಣ್ಣಪುಟ್ಟ ಅನುದಾನದ ಕಾಮಗಾರಿ ಈಗ ನಡೆಯುತ್ತಿದೆ. ಅದನ್ನೇ ಫ್ಲೆಕ್ಸ್ ಹಾಕಿ ಪ್ರಚಾರ ಪಡೆದು ನಾನು ಅನುದಾನ ತಂದೆ ಇಲ್ಲ ಎನ್ನುವಂತೆ ಬಿಂಬಿಸಲು ಹೊರಟಿದ್ದು ಬಿಜೆಪಿ ಮೂರ್ಖತನಕ್ಕೆ ಸಾಕ್ಷಿಯಾಗಿದೆ ಎಂದು ವಾಗ್ಧಾಳಿ ನಡೆಸಿದರು.
ಬಿಜೆಪಿಯವರಿಗೆ ಫ್ಲೆಕ್ಸ್ ಹಾಕುವ ಹುಚ್ಚು ಇದ್ದರೆ ತಮ್ಮ ಮನೆ ಮುಂದೆ ಹಾಕಿಕೊಳ್ಳಲಿ. ವೃತ್ತಗಳಲ್ಲಿ ಹಾಕಿ ಜನರಿಗೆ ತಪ್ಪು ಸಂದೇಶ ಕೊಡುವುದು ಬೇಡ. ಎಲ್ಲಿಂದ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ದಿ ಮಾಡಬೇಕು ಎಂದು ನನಗೂ ಗೊತ್ತಿದೆ. ಮೂರು ಬಾರಿ ಶಾಸಕನಾಗಿದ್ದೇನೆ. ನಿಮ್ಮ ಸಾಧನೆ ಏನು ಎಂದು ಜನರಿಗೆ ತಿಳಿಸಿ, ಅದನ್ನು ಬಿಟ್ಟು ಫ್ಲೆಕ್ಸ್ ರಾಜಕಾರಣ ಮಾಡುವುದನ್ನು ಬಿಡಿ ಎಂದ ಶಾಸಕರು, ಬಿಜೆಪಿಯವರ ಮನೆಯಿಂದ ಹಣ ತಂದು ಕೊಟ್ಟಿಲ್ಲ. ಸರ್ಕಾರದ ಹಣ ಬಂದಿದೆ. ಅಭಿವೃದ್ದಿ ನಾನು ಮುಂದುವರೆಸಿದ್ದೇನೆ. ಆಸ್ಪತ್ರೆ ಅಭಿವೃದ್ದಿಗೆ ಹಣ ಬಂದಿಲ್ಲ ಎಂದು ಬಿಜೆಪಿ ನಗರ ಅಧ್ಯಕ್ಷ ಪದೇಪದೇ ಹೇಳುತ್ತಿದ್ದಾರೆ. ನಾನು ದಾಖಲೆ ನೀಡಿದರೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡುತ್ತಾರಾ ಎಂದು ಪ್ರಶ್ನಿಸಿದರು.
ಈ ವೇಳೆ ಸಾಗರ ನಗರಸಭೆಯ ಪೌರಾಯುಕ್ತ ಎಚ್.ಕೆ.ನಾಗಪ್ಪ, ನಗರಸಭೆ ಅಧಿಕಾರಿಗಳಾದ ಮದನ್, ವಿಠ್ಠಲ್ ಹೆಗಡೆ, ರಾಜೇಶ್, ಕಾಂಗ್ರೇಸ್ ಪ್ರಮುಖರಾದ ಸುರೇಶಬಾಬು, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ದಿನೇಶ್ ಡಿ., ಇಂಧೂಮತಿ ಇನ್ನಿತರರು ಹಾಜರಿದ್ದರು.
BREAKING: ಅಮೆರಿಕದ ಮಿಸಿಸಿಪ್ಪಿಯಲ್ಲಿ ಭೀಕರ ಗುಂಡಿನ ದಾಳಿ: 6 ಮಂದಿ ಸಾವು








