ಶಿವಮೊಗ್ಗ : ಸಾಗರದ ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ, ಕ್ಷೇತ್ರವ್ಯಾಪ್ತಿಯಲ್ಲಿ ಗಾಂಜಾ ಸೇರಿ ವಿವಿಧ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ವಿಫಲವಾಗಿರುವ ಆಡಳಿತದ ಕ್ರಮದ ವಿರುದ್ದ ಪ್ರತಿಭಟನೆ ನಡೆಸಲಾಯಿತು. ಅಂಬೇಡ್ಕರ್ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಪೊಲೀಸ್ ಸ್ಟೇಷನ್ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು.
ಶಿವಮೊಗ್ಗದ ಸಾಗರದಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಕ್ಷೇತ್ರವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಪ್ರಕರಣ ಜಾಸ್ತಿಯಾಗಿದೆ. ಗಾಂಜಾ ಎಲ್ಲಿಂದ ಬರುತ್ತಿದೆ, ಯಾರಿಗೆ ಸರಬರಾಜು ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ಗೊತ್ತಿದ್ದರೂ ಅವರು ಗಮನ ಹರಿಸುತ್ತಿಲ್ಲ. ಹೊರಜಿಲ್ಲೆಗಳಿಂದ ಗಾಂಜಾ ಅಕ್ರಮವಾಗಿ ಸರಬರಾಜು ಆಗುತ್ತಿದೆ. ತಕ್ಷಣ ಇದರ ವಿರುದ್ದ ಕ್ರಮ ಜರುಗಿಸಬೇಕು. ಇಲ್ಲವಾದರೆ ಆಡಳಿತದ ವಿರುದ್ದ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಪದೇ ಪದೇ ಸಾಗರ ಕ್ಷೇತ್ರದಲ್ಲಿ ಈ ರೀತಿಯ ಪ್ರಕರಣಗಳು ದಾಖಲಾಗುತ್ತಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ
ಸಾಗರ ತಾಲ್ಲೂಕಿನಲ್ಲಿ ಅಸಮರ್ಪಕ ವಿದ್ಯುತ್ ವ್ಯವಸ್ಥೆಯಿಂದ ರೈತರು ಹೈರಾಣಾಗಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದರು.
ತಮ್ಮ ಫಸಲು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ರೈತರು ಸಂಕಷ್ಟ ಸಂದರ್ಭದಲ್ಲಿ ನೆರವಾಗಲಿ ಎಂದು ಬೆಳೆವಿಮೆ ಪಾವತಿ ಮಾಡಿದ್ದಾರೆ. ಈತನಕ ಬೆಳೆವಿಮೆ ಬಂದಿಲ್ಲ. ತಾಲ್ಲೂಕಿನ ಮಳೆಮಾಪನಾ ಕೇಂದ್ರ ಹಾಳಾಗಿದೆ. ಶಾಸಕರು ಇದರ ಬಗ್ಗೆ ಏಕೆ ಗಮನ ಹರಿಸಲಿಲ್ಲ. ರೈತರಿಗೆ ಸಮರ್ಪಕ ವಿದ್ಯುತ್ ಕೊಡಿಸಲು, ಬೆಳೆವಿಮೆ ಕೊಡಿಸಲು ಶಾಸಕರು ಸಂಪೂರ್ಣ ವಿಫಲವಾಗಿದ್ದಾರೆ. ಶಾಸಕರ ಮನೆ ಹತ್ತಿರ ಇರುವ ಒಂದು ಬಾವಿಯೆ ನಾಪತ್ತೆಯಾಗಿದೆ. ಕೆರೆಬಾವಿಗಳನ್ನು ಮುಚ್ಚುವಂತೆ ಇಲ್ಲ ಎನ್ನುವ ಸುಪ್ರೀಂ ಕೋರ್ಟ್ ನಿಯಮ ಇದ್ದರೂ ಬಾವಿ ಕಳೆದು ಹೋಗಿರುವುದರ ವಿರುದ್ದ ಪೌರಾಯುಕ್ತರು ಏಕೆ ಕ್ರಮ ತೆಗೆದುಕೊಂಡಿಲ್ಲ. ಉಪವಿಭಾಗಾಧಿಕಾರಿಗಳು ಸುಮೋಟೋ ಕೇಸ್ ಏಕೆ ದಾಖಲು ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು.
ಸಾಗರ ತಾಲ್ಲೂಕಿನಲ್ಲಿ ಪ್ರತಿಭಟನೆ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಶಾಸಕರು ಹೇಳಿದ್ದಾರೆ ಎಂದು ಅಧಿಕಾರಿಗಳು ಪ್ರತಿಭಟನೆ ಮಾಡಲು ಅವಕಾಶ ಕೊಡುತ್ತಿಲ್ಲ. ಅಧಿಕಾರಿಗಳೆ ಶಾಸಕರು ಹೇಳಿದ ಕೆಲಸ ಮಾಡಬೇಡಿ. ನ್ಯಾಯಸಮ್ಮತವಾಗಿರುವುದಕ್ಕೆ ಅವಕಾಶ ಕೊಡಿ. ಕಾನೂನು ಪ್ರಕಾರ ನಡೆದುಕೊಳ್ಳಿ. ಮಾರಿಜಾತ್ರೆ ಸಂದರ್ಭದಲ್ಲಿ ನಾನು ಜಾತ್ರೆ ಸಮಿತಿಯಲ್ಲಿ ಕೈ ಆಡಿಸಿಲ್ಲ ಎಂದು ಪ್ರಮಾಣ ಮಾಡಿ ಹೇಳುತ್ತೇನೆ. ಸಿಗಂದೂರು ದೇವಸ್ಥಾನದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಎಲ್ಲರೂ ಹೊಂದುಕೊAಡು ಹೋಗಿ ಎಂದು ಸಲಹೆ ನೀಡಿದ್ದೇನೆಯೆ ವಿನಃ ಹಸ್ತಕ್ಷೇಪ ಮಾಡಿಲ್ಲ ಎಂದು ದೇವಿ ಎದುರು ಪ್ರಮಾಣ ಮಾಡಲು ಸಿದ್ದನಿದ್ದೇನೆ. ಆಡಳಿತದಲ್ಲಿ ಈಗ ಮೂರು ವರ್ಷ ಕಳೆದಿದೆ, ಇನ್ನು ಆಡಳಿತ ವೈಫಲ್ಯವನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಪಕ್ಷದ ವತಿಯಿಂದ ಆಡಳಿತ ವೈಫಲ್ಯದ ವಿರುದ್ದ ನಿರಂತರ ಹೋರಾಟ ಮಾಡುತ್ತೇವೆ ಕ್ಷೇತ್ರದ ಜನತೆ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದರು.
ಶಾಸಕ ಚನ್ನಬಸಪ್ಪ ಮಾತನಾಡಿ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಗಾಂಜಾಮುಕ್ತ ರಾಜ್ಯವಾಗಬೇಕಾದರೆ ಪೊಲೀಸರಿಗೆ ಮುಕ್ತವಾಗಿ ಆಡಳಿತ ನಡೆಸಲು ಅವಕಾಶ ಕೊಡಿ. ತಮಗೆ ನ್ಯಾಯ ಸಿಗುವುದಿಲ್ಲ ಎಂದು ಜನರು ಠಾಣೆಗೆ ದೂರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಪರಿಸರಕ್ಕೆ ಹಾನಿ ತರುವ ಪಂಪ್ಡ್ ಸ್ಟೋರೇಜ್ ಬೇಡ ಎಂದು ವಾದ ಮಾಡಿದರೆ ಶಾಸಕರು ಬೇಕು ಎನ್ನುತ್ತಾರೆ. ಇದು ಕಾಮನ್‌ಸೆನ್ಸ್ ಇಲ್ಲದ ಸರ್ಕಾರವಾಗಿದ್ದು ಗೂಂಡಾಗಿರಿಯನ್ನು ಪೋಷಿಸಿಕೊಂಡು ಬರುತ್ತಿದೆ. ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ವಿರುದ್ದ ಜನರು ತೀವೃ ಆಕ್ರೋಶ ವ್ಯಕ್ತಪಡಿಸಿದ್ದಾರೆ ಬರುವ ದಿನಗಳ್ಲಲಿ ಸರ್ಕಾರದ ವಿರುದ್ದ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.
ಈ ಪ್ರತಿಭಟನೆ ಉದ್ದೇಶಿಸಿ ಗಣೇಶ್ ಪ್ರಸಾದ್, ಟಿ.ಡಿ.ಮೇಘರಾಜ್, ರತ್ನಾಕರ ಹೊನಗೋಡು, ಮಲ್ಲಿಕಾರ್ಜುನ ಹಕ್ರೆ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಧುರಾ ಶಿವಾನಂದ್, ಪ್ರಮುಖರಾದ ಪ್ರಸನ್ನ ಕೆರೆಕೈ, ದೇವೇಂದ್ರಪ್ಪ, ಮೈತ್ರಿ ಪಾಟೀಲ್, ವಿ.ಮಹೇಶ್, ಸತೀಶ್ ಕೆ., ಸಂತೋಷ್ ರಾಯಲ್, ಸಂತೋಷ್ ಶೇಟ್, ಆರ್.ಶ್ರೀನಿವಾಸ್, ಬಿ.ಎಚ್.ಲಿಂಗರಾಜ್, ಭೈರಪ್ಪ, ಪ್ರೇಮ ಸಿಂಗ್, ಅರುಣ ಕುಗ್ವೆ, ಪ್ರಶಾಂತ ಕೆ.ಎಸ್., ಹರೀಶ್ ಮೂಡಳ್ಳಿ ಇನ್ನಿತರರು ಹಾಜರಿದ್ದರು.
BREAKING NEWS: ಶಕ್ತಿ ಯೋಜನೆಯ ‘ಉಚಿತ ಟಿಕೆಟ್ ಹಣ’ ದುರ್ಬಳಕೆ: ಬಿಎಂಟಿಸಿಯ ನಾಲ್ವರು ಕಂಡಕ್ಟರ್ ಸಸ್ಪೆಂಡ್
ರಾಜ್ಯದ ಎಲ್ಲಾ ಕ್ಲಬ್ ಗಳ ಸದನ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಿ: ಸಭಾಧ್ಯಕ್ಷರಿಗೆ MLC ರಮೇಶ್ ಬಾಬು ಪತ್ರ








