ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ಜನಸಾಮಾನ್ಯರನ್ನು ಬೆಲೆ ಏರಿಕೆಯ ಸುಳಿಗೆ ತಳ್ಳಿದೆ ಹಾಗೂ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ನೀಡದೆ ‘ಬಾಕಿ ಸರ್ಕಾರ’ವಾಗಿ ಮಾರ್ಪಟ್ಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿB ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಂತೆ ಅವರು ಕರೆ ನೀಡಿದ್ದಾರೆ.
ಬೆಲೆ ಏರಿಕೆಯಿಂದ ಜನಜೀವನ ಅಸ್ತವ್ಯಸ್ತ
ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, “2014ರಲ್ಲಿ 400 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಇಂದು 950 ರೂಪಾಯಿ ದಾಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಇದರಿಂದ ಹೋಟೆಲ್ ಉದ್ಯಮ ಮತ್ತು ಆಟೋ ಚಾಲಕರು ಬೀದಿಗೆ ಬೀಳುವಂತಾಗಿದೆ. ಈ ಬೆಲೆ ಏರಿಕೆಯಿಂದ ಬಿಜೆಪಿ ಕಾರ್ಯಕರ್ತರು ಕೂಡ ಬಸವಳಿದಿದ್ದಾರೆ. ಹೀಗಾಗಿ, ಜನವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿಗೆ ಅವರದ್ದೇ ಪಕ್ಷದ ಕಾರ್ಯಕರ್ತರು ಉಪಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಬೇಕು” ಎಂದು ಆಗ್ರಹಿಸಿದರು.
ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಕೊಡಿಸಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಭಂಡಾರಿ, “ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಜೋಶಿ ಅವರು ಮೊದಲು ಪ್ರಧಾನಿ ಮೋದಿಯವರ ಜೊತೆ ಮಾತನಾಡಿ ಕರ್ನಾಟಕಕ್ಕೆ ಬರಬೇಕಾದ ₹1.25 ಲಕ್ಷ ಕೋಟಿ ತೆರಿಗೆ ಪಾಲನ್ನು ಕೊಡಿಸಲಿ. 15ನೇ ಹಣಕಾಸು ಆಯೋಗದ ಅನುದಾನ, ಜಲಜೀವನ್ ಮಿಷನ್ ಹಾಗೂ ಮಹಾದಾಯಿ ಯೋಜನೆಯ ಬಾಕಿ ಹಣವನ್ನು ತರುವ ಕೆಲಸವನ್ನು ಅವರು ಮಾಡಲಿ” ಎಂದು ಸವಾಲು ಹಾಕಿದರು.
ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಅಪಾರ
ದಾವಣಗೆರೆ ಅಭಿವೃದ್ಧಿಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಪಾತ್ರ ಹಿರಿದು. ದಾವಣಗೆರೆಯನ್ನು ‘ವಿದ್ಯಾನಗರಿ’ಯನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಶಿವಶಂಕರಪ್ಪ ಅವರ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಕೂಡ ಸಾಥ್ ನೀಡಬೇಕು ಎಂದು ಅವರು ಮನವಿ ಮಾಡಿದರು.
ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ
“ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ದೇಶಕ್ಕೆ ಮಾದರಿಯಾಗಿದೆ. ಕಾಂಗ್ರೆಸ್ ಜನಸಾಮಾನ್ಯರ ಹಿತ ಕಾಯುವ ಪಕ್ಷವಾದರೆ, ಬಿಜೆಪಿ ಕೇವಲ ಅಂಬಾನಿ, ಅದಾನಿಯಂತಹ ಕಾರ್ಪೊರೇಟ್ ಕಂಪನಿಗಳ ಪರ ಕೆಲಸ ಮಾಡುತ್ತಿದೆ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಜೋಶಿ ಅವರಿಗೆ ಯಡಿಯೂರಪ್ಪ ಕುಟುಂಬ ಹಾಗೂ ಜೆಡಿಎಸ್ ಕುಟುಂಬ ರಾಜಕಾರಣ ಕಾಣಿಸುತ್ತಿಲ್ಲವೇ?” ಎಂದು ಪ್ರಶ್ನಿಸಿದ ಅವರು, ಬಿಜೆಪಿಗೆ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
“ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ, ಜನವರಿ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಲಿದೆ” ಎಂದು ಮಂಜುನಾಥ್ ಭಂಡಾರಿ ವಿಶ್ವಾಸ ವ್ಯಕ್ತಪಡಿಸಿದರು.








