ಕಲಬುರಗಿ : ರೈತರ 3.50 ಕೋಟಿ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದ ಕೇಂದ್ರ ಬಿಜೆಪಿ ಸರ್ಕಾರ, ಶ್ರೀಮಂತರ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಕೇಳಿದರೆ, ನಾವು ಬದುಕು ಕಟ್ಟುವ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ.
ನಮ್ಮ ಸರ್ಕಾರದ ಜನಪರ ಐದು ಗ್ಯಾರಂಟಿ ಯೋಜನೆಗಳನ್ನು ಜಾತಿ ಧರ್ಮದ ಮಿತಿ ದಾಟಿ ಎಲ್ಲರಿಗೂ ತಲುಪಿಸುತ್ತಿರುವುದು ನೋಡಿ ಬಿಜೆಪಿ ನಾಯಕರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಜನರ ತೆರಿಗೆಯ ದುಡ್ಡನ್ನು ಈ ಯೋಜನೆಗಳ ಮೂಲಕ ಮತ್ತೆ ಜನರಿಗೆ ವಾಪಸ್ ಕೊಡುತ್ತಿದ್ದೇವೆ. ಇದಕ್ಕೆ ಬಿಜೆಪಿಗರು ಬಿಟ್ಟಿ ಭಾಗ್ಯ ಎಂದು ಟೀಕಿಸುತ್ತಿದ್ದಾರೆ. ” ಬಿಜೆಪಿಗರು ಬರೀ ವಾಟ್ಸಪ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ಮುಳುಗಿರುತ್ತಾರೆ ಅವರಿಗೆ ವಾಸ್ತವ ಗೊತ್ತಿಲ್ಲ. ಬಡತನ, ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಸಂಸದ ಉಮೇಶ ಜಾಧವ ಅವರು ಕುಂಬಕರ್ಣ ನಿದ್ದೆಯಿಂದ ಎದ್ದು ವಾಸ್ತವದ ದರ್ಶನ ಪಡೆಯಲಿ ಎಂದರು.
ರೈತರ 3.50 ಕೋಟಿ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದ ಕೇಂದ್ರ ಬಿಜೆಪಿ ಸರ್ಕಾರ, ಶ್ರೀಮಂತರ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ರಷ್ಯಾ ಯುಕ್ರೇನ್ ಯುದ್ದ ನಿಲ್ಲಿಸಲು ಆಸಕ್ತಿ ತೋರಿಸುವ ಮೋದಿ, ಭೀಕರ ಬರಗಾಲ ಎದುರಿಸುತ್ತಿರುವ ಕರ್ನಾಟಕದಲ್ಲಿ ನರೇಗಾ ಅಡಿಯಲ್ಲಿ ಮಾನವ ದಿನ ಹೆಚ್ಚಿಸಲು ಆಸಕ್ತಿ ತೋರಿಸುತ್ತಿಲ್ಲ. ₹18,171 ಕೋಟಿ ಬರಪರಿಹಾರ ಬಿಡುಗಡೆ ಮಾಡುವಂತೆ ಬೇಡಿಕೆ ಸಲ್ಲಿಸಲಾಗಿದೆ. ಅದಿನ್ನೂ ಬಿಡುಗಡೆಯಾಗಿಲ್ಲ. ಸಂಸದ ಉಮೇಶ್ ಜಾಧವ ಅವರು ಈ ಬಗ್ಗೆ ಮಾತನಾಡಲಿ ಎಂದು ಹೇಳಿದ್ದಾರೆ.