ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಮಾಜಿ ಸಚಿವರು ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಭೈರತಿ ಬಸವರಾಜ್, ಮಾಜಿ ಸಚಿವರಾದ ಕೆ.ಸಿ. ನಾರಾಯಣಗೌಡ, ಬಿಜೆಪಿ ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್ ಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಒಳಗೊಂಡ ಬಿಜೆಪಿ ಸತ್ಯಶೋಧನಾ ತಂಡವು ಇಂದು ಬೆಳಿಗ್ಗೆ 10.00 ಗಂಟೆಗೆ ನಾಗಮಂಗಲದ ಅಹಿತಕರ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಮಾಜಿ ಡಿಸಿಎಂ ಡಾ.ಸಿಎನ್ ಅಶ್ವತ್ಥನಾರಾಯಣ ಅವರು, ಬಿಜೆಪಿ ಸತ್ಯಶೋಧನಾ ಸಮಿತಿಯು ಇಂದು ನಾಗಮಂಗಲಕ್ಕೆ ಭೇಟಿ ಕೊಡಲಿದೆ. ಅಲ್ಲಿನ ಮಾಹಿತಿಯನ್ನು ಪಡೆಯಲಿದೆ ಎಂದು ತಿಳಿಸಿದರು.
ನನ್ನ ನೇತೃತ್ವದಲ್ಲಿ ಬಿಜೆಪಿ ಸತ್ಯಶೋಧನಾ ಸಮಿತಿಯನ್ನು ರಚಿಸಿದ್ದು, ಮಾಜಿ ಸಚಿವರು ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಭೈರತಿ ಬಸವರಾಜ್, ಮಾಜಿ ಸಚಿವ ಕೆ.ಸಿ. ನಾರಾಯಣಗೌಡ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀ ಅಶ್ವಿನ್ ಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಸಮಿತಿ ಒಳಗೊಂಡಿದೆ ಎಂದರು.
ನಾಗಮಂಗಲದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಪ್ರಾರಂಭದಲ್ಲಿ ಅದೇನೂ ಇಲ್ಲ ಎಂಬಂತೆ ಹೇಳಿಕೆ ಕೊಟ್ಟರು. ನಂತರ ಇಂಟೆಲಿಜೆನ್ಸ್ ಮುಖ್ಯಸ್ಥರನ್ನು ವರ್ಗಾಯಿಸಿದರು. ಇನ್‍ಸ್ಪೆಕ್ಟರ್ ಅನ್ನು ಅಮಾನತು ಮಾಡಿದ್ದು, ಕಾನೂನು- ಸುವ್ಯವಸ್ಥೆ ನಿರ್ವಹಿಸುವಲ್ಲಿನ ವೈಫಲ್ಯವು ನಾಗಮಂಗಲ ಘಟನೆ ಮೂಲಕ ವ್ಯಕ್ತವಾಗಿದೆ ಎಂದು ತಿಳಿಸಿದರು. ಕೇರಳದವರು ಇದರ ಹಿಂದಿದ್ದು, ಎಸ್‍ಡಿಪಿಐನವರು ಎಂಬ ಅನುಮಾನಗಳಿವೆ ಎಂದು ವಿವರಿಸಿದರು.
ನಾಗಮಂಗಲದಲ್ಲಿ ಒಂದು ಕೋಮಿನವರು ಪ್ರಚೋದನೆ ಮಾಡಿದ್ದಾರೆ. ನಮ್ಮ ಸಂಸ್ಕøತಿ ಎನಿಸಿದ ವಿನಾಯಕನ ಚತುರ್ಥಿ ಕಾರ್ಯಕ್ರಮವು ದೇಶದ ಸದೃಢತೆಗೆ ಶಕ್ತಿ ತುಂಬುತ್ತದೆ. ಅಂಥ ಸಂದರ್ಭದಲ್ಲಿ ಅಡಚಣೆ, ಅನವಶ್ಯಕವಾಗಿ ತೊಂದರೆ ಕೊಡುತ್ತಿದ್ದು, ಇದಕ್ಕೆ ಗೃಹ ಇಲಾಖೆ ಬೆಂಬಲ ಕೊಡುತ್ತಿದೆ ಎಂದು ಟೀಕಿಸಿದರು.
ಈ ಸರಕಾರ ಒಂದು ವರ್ಗ, ಒಂದು ಧರ್ಮಕ್ಕೆ ಸೀಮಿತವಾಗಿ ವರ್ತಿಸುತ್ತಿದೆ. ಎಷ್ಟೋ ಕಡೆ ಗಣೇಶ ಮೂರ್ತಿ ಇಡಲು ಬಿಟ್ಟಿಲ್ಲ. ಮೆರವಣಿಗೆಗೆ ಕಡಿವಾಣ ಹಾಕಿದ್ದಾರೆ. ಫ್ರೀಡಂ ಪಾರ್ಕಿನಲ್ಲಿ ಗಣೇಶ ಮೂರ್ತಿಯನ್ನೇ ಅರೆಸ್ಟ್ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕಿಸಿದರು. ನೂರಾರು ಘಟನೆಗಳು ಕಣ್ಣೆದುರು ಇವೆ. ತುಷ್ಟೀಕರಣದ ಪರಿಣಾಮ, ಆಡಳಿತದ ಮೇಲೆ ಹಿಡಿತ- ಸ್ಪಷ್ಟತೆ ಇಲ್ಲದ ಕಾರಣ ಸಮಾಜದಲ್ಲಿ ತುಂಬ ಗೊಂದಲ, ಭಯ, ಅತೃಪ್ತಿಯ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಯಚೂರಲ್ಲಿ ಅಂತ್ಯ ಸಂಸ್ಕಾರದ ವೇಳೆಯೇ 2 ಗುಂಪುಗಳ ನಡುವೆ ಗಲಾಟೆ: ಓರ್ವ ಸಾವು, 8 ಮಂದಿ ಸ್ಥಿತಿ ಗಂಭೀರ
ಇಂದು ‘ಈದ್ ಮಿಲಾದ್’ ಹಬ್ಬ: ಬೆಂಗಳೂರಲ್ಲಿ ‘ಪೊಲೀಸ್ ಇಲಾಖೆ’ಯ ಈ ಮಾರ್ಗಸೂಚಿ ಕ್ರಮ ಪಾಲನೆ ಕಡ್ಡಾಯ