ಬೆಂಗಳೂರು : “ಗ್ಯಾರಂಟಿ ಯೋಜನೆ ನಿಲ್ಲಿಸಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಹೀಗಾಗಿ ಜನರು ಜಾಗೃತರಾಗಿರಬೇಕು ಎಂದು ದೇವೇಗೌಡರು ಸಂದೇಶ ನೀಡಿದ್ದಾರೆ” ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.
ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಯೋಜನೆ ನಿಲ್ಲಲಿದೆ ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ವಿರೋಧ ಪಕ್ಷದವರ ಹಣೆಯಲ್ಲಿ ಬರೆದಿಲ್ಲ. ನಮ್ಮ ತಾಯಂದಿರ ಬದುಕು ಹಾಗೂ ಸಂಸಾರ ಉತ್ತಮವಾಗಿ ಸಾಗಲಿ ಎಂದು ನಾವು ಗೃಹಲಕ್ಷ್ಮಿ ಹಣ ನೀಡುತ್ತಿದ್ದೇವೆ. ಇದನ್ನು ತಪ್ಪಿಸಲು ಬಿಜೆಪಿ ಹಾಗೂ ಜೆಡಿಎಸ್ ಹೊರಟಿದೆ. ಜನ ಹುಷಾರಾಗಿರಬೇಕು” ಎಂದು ತಿಳಿಸಿದರು.
ಮೂರಕ್ಕೆ ಮೂರು ಕ್ಷೇತ್ರ ಗೆಲ್ಲುತ್ತೇವೆ:
ಉಪಚುನಾವಣೆ ತಯಾರಿ ಬಗ್ಗೆ ಕೇಳಿದಾಗ, “ರಾಜ್ಯದ ಜನ ನಮ್ಮ ಗ್ಯಾರಂಟಿ ಯೋಜನೆಗಳು ಹಾಗೂ ಆಡಳಿತವನ್ನು ಒಪ್ಪಿದ್ದು, ಈ ಬಾರಿ ಉಪಚುನಾವನೇಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಮೂರು ಕ್ಷೇತ್ರಗಲ್ಲಿ ಪ್ರಚಾರ ಮುಗಿಸಿದ್ದೇವೆ. ಬಿಜೆಪಿ ಏನೇ ತಂತ್ರ ಪ್ರಯೋಗಿಸಿದರೂ ಜನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದಂತೆ ಈ ಮೂರು ಕ್ಷೇತ್ರಗಳ ಚುನಾವಣೆಯಲ್ಲಿ ಮತ ಹಾಕಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿಗಳ ದಾರಿತಪ್ಪಿಸಿದ್ದಾರೆ
ಅಬಕಾರಿ ಇಲಾಖೆಯಲ್ಲಿ ₹700 ಕೋಟಿ ವಸೂಲಿ ಬಗ್ಗೆ ಪ್ರಧಾನಿಗಳ ಆರೋಪದ ಬಗ್ಗೆ ಕೇಳಿದಾಗ, “ಇದು ಸುಳ್ಳು ಆರೋಪ, ಅವರನ್ನು ಯಾರೋ ದಾರಿತಪ್ಪಿಸಿದ್ದಾರೆ. ಈ ವಿಚಾರವಾಗಿ ಆರೋಪ ಸಾಬೀತುಪಡಿಸಿದರೆ ರಾಜಕೀಯ ತ್ಯಜಿಸುವುದಾಗಿ ಮುಖ್ಯಮಂತ್ರಿಗಳು ಬಹಿರಂಗ ಸವಾಲು ಹಾಕಿದ್ದಾರೆ. ಇದಕ್ಕಿಂತ ಬೇರೇನು ಬೇಕು?” ಎಂದು ಹೇಳಿದರು.
ದ್ವೇಷ ರಾಜಕಾರಣ ಮಾಡುತ್ತಿರುವುದು ಬಿಜೆಪಿ
ಕೋವಿಡ್ ಅಕ್ರಮ ವಿಚಾರದಲ್ಲಿ ನ್ಯಾ.ಕುನ್ಹಾ ಅವರ ಸಮಿತಿ ಸರ್ಕಾರದ ಏಜೆಂಟ್ ರಂತೆ ನಡೆದುಕೊಳ್ಳುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ಪರವಾಗಿ ವರದಿ ಕೊಟ್ಟರೆ ಎಲ್ಲವೂ ನ್ಯಾಯಬದ್ಧವಾಗಿರುತ್ತವೆ. ಅವರ ವಿರುದ್ಧವಾಗಿ ನೀಡುವ ವರದಿ ಬಗ್ಗೆ ಹೀಗೆ ಆರೋಪ ಮಾಡುತ್ತಾರೆ. ದ್ವೇಷ ರಾಜಕಾರಣ ಮಾಡುತ್ತಿರುವವರು ಬಿಜೆಪಿಯವರು. ಅವರು ಯಾವುದೇ ಆರೋಪ ಮಾಡಿಕೊಳ್ಳಲಿ” ಎಂದು ಕಿಡಿಕಾರಿದರು.
ವಯನಾಡಿನಲ್ಲಿ ಪ್ರಿಯಾಂಕಾ ಗೆಲವು
ವಯನಾಡಿನ ಉಪಚುನಾವಣೆ ಬಗ್ಗೆ ಕೇಳಿದಾಗ, “ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಅವರು ಗೆಲ್ಲುವುದು ನಿಶ್ಚಿತ. ಅಲ್ಲಿ ಬೇರೆ ಪಕ್ಷಗಳ ನಾಯಕರು ಕೂಡ ಪ್ರಿಯಾಂಕಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಪ್ರಿಯಾಂಕಾ ಅವರನ್ನು ಸಂಸತ್ ಸದಸ್ಯೆಯಾಗಿ ನೋಡಲು ಬಯಸಿದ್ದಾರೆ. ಅವರು ಹಾಗೂ ರಾಹುಲ್ ಗಾಂಧಿ ಅವರು ಕ್ಷೇತ್ರದ ಅಭಿವೃದ್ಧಿ ಮಾಡಲಿದ್ದಾರೆ. ಅಲ್ಲಿನ ಉಪಚುನಾವಣೆ ಏಕಪಕ್ಷೀಯ ಸ್ಪರ್ಧೆಯಾಗಿದೆ” ಎಂದು ತಿಳಿಸಿದರು.
BIG NEWS : ಸೈಬರ್ ವಂಚನೆ ತಡೆಗೆ `TRAI’ನಿಂದ ಮಹತ್ವದ ಕ್ರಮ : ದೇಶಾದ್ಯಂತ 18 ಲಕ್ಷ ಮೊಬೈಲ್ ಸಂಖ್ಯೆ ನಿರ್ಬಂಧ!
BREAKING: ನ.14ರಂದು ಮಹತ್ವದ ‘ರಾಜ್ಯ ಸಚಿವ ಸಂಪುಟ ಸಭೆ’ ನಿಗದಿ | Karnataka Cabinet Meeting