ಬೆಂಗಳೂರು: ವಾಲ್ಮೀಕಿ ನಿಗಮದ 187 ಕೋಟಿಯಷ್ಟು ಮೊತ್ತದ ದೊಡ್ಡ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ರಾಜ್ಯದ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ನೇತೃತ್ವದ ಸಭೆಯು ತೀರ್ಮಾನ ಕೈಗೊಂಡಿದೆ ಎಂದು ಪ್ರಕಟಿಸಿದರು. 28ರಂದು ಎಲ್ಲ ಜಿಲ್ಲೆಗಳು, ತಾಲ್ಲೂಕು ಮಟ್ಟದಲ್ಲಿ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ವಿವರ ನೀಡಿದರು.
ಹಣಕಾಸಿನ ಸಚಿವರೂ ಆಗಿರುವ, 14ಕ್ಕೂ ಹೆಚ್ಚು ಬಾರಿ ಹಣಕಾಸು ಸಚಿವರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ಬಾರದೆ ಇಷ್ಟು ದೊಡ್ಡ ಮೊತ್ತ ಬೇರೆಡೆ ವರ್ಗಾವಣೆ ಆದುದು ಹೇಗೆ? ಆದ್ದರಿಂದ, ಈ ಹಗರಣದಲ್ಲಿ ಸಿದ್ದರಾಮಯ್ಯನವರ ಮೇಲೆ ಅನುಮಾನ ಬರುತ್ತಿದೆ ಎಂದು ನುಡಿದರು.
ಸಿದ್ದರಾಮಯ್ಯನವರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಚಂದ್ರಶೇಖರ್ ಎಂಬ ಅಮಾಯಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿವರ ಮೌಖಿಕ ಆದೇಶದನ್ವಯ 187 ಕೋಟಿ ಹಣ ದುರ್ಬಳಕೆ ಮಾಡಿಕೊಂಡಿದ್ದನ್ನು ಡೆತ್ ನೋಟಿನಲ್ಲಿ ಅವರು ಬರೆದಿಟ್ಟಿದ್ದರು ಎಂದು ತಿಳಿಸಿದರು.
25 ಸಾವಿರ ಕೋಟಿ ದುರ್ಬಳಕೆ…
ಸರಕಾರಗಳು ಪರಿಶಿಷ್ಟ ವರ್ಗಗಳ ಸಮುದಾಯದ ಏಳಿಗೆ, ಮಕ್ಕಳ ಭವಿಷ್ಯದ ಸಲುವಾಗಿ, ಎಸ್‍ಸಿ, ಎಸ್‍ಟಿಗಳಿಗೆ ಮೂಲಸೌಕರ್ಯ, ಭೂಒಡೆತನ, ನೇರ ಸಾಲ, ಉನ್ನತ ಶಿಕ್ಷಣ ಸೇರಿ ಶೇ 24 ಹಣವನ್ನು ಮೀಸಲಿಡಬೇಕಿದೆ. ಆದರೆ, ಕಳೆದ ವರ್ಷ ಈ ಸಮುದಾಯದ ಏಳಿಗೆಗಾಗಿ ಮೀಸಲಿಟ್ಟ ಸುಮಾರು 11 ಸಾವಿರ ಕೋಟಿ ಮೊತ್ತವನ್ನು ಬೇರೆ ಬೇರೆ ಕಡೆ ವರ್ಗಾಯಿಸಿದ ಕಾಂಗ್ರೆಸ್ ಸರಕಾರ ಅವರಿಗೆ ಅನ್ಯಾಯ ಮಾಡಿದೆ ಎಂದು ಆಕ್ಷೇಪಿಸಿದರು. ಈ ವರ್ಷ 14 ಸಾವಿರ ಕೋಟಿಯನ್ನು ಬೇರೆಡೆ ವರ್ಗಾವಣೆ ಮಾಡಿದ್ದಾರೆ. 2 ವರ್ಷಗಳಲ್ಲಿ ದಲಿತರ ಹಣ 25 ಸಾವಿರ ಕೋಟಿಯನ್ನು ದುರ್ಬಳಕೆ ಮಾಡಿದ್ದಾರೆ ಎಂದು ಟೀಕಿಸಿದರು.
ವಾಲ್ಮೀಕಿ ನಿಗಮದ ಹಣವನ್ನು ತೆಲಂಗಾಣಕ್ಕೆ ವರ್ಗಾವಣೆ ಮಾಡಿದ್ದರು. ಸೆಕ್ಯುರಿಟಿ ಏಜೆನ್ಸಿ, ಚಿನ್ನದ ಅಂಗಡಿ, ವೈನ್ ಶಾಪ್‍ಗಳಲ್ಲಿ ಈ ಹಣವನ್ನು ವಿತ್‍ಡ್ರಾ ಮಾಡಿದ್ದರು. ಬಳ್ಳಾರಿಯ ಮೈನಿಂಗ್ ಕಂಪನಿಯಲ್ಲಿ ಹಣ ಡ್ರಾ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ಮಾಹಿತಿ ಇಲ್ಲದೆ ಇದು ನಡೆದಿದೆಯೇ? ಈ ಭ್ರಷ್ಟಾಚಾರದ ಹಗರಣದಲ್ಲಿ ಹಣಕಾಸು ಇಲಾಖೆ ಶಾಮೀಲಾಗಿದೆಯೇ ಎಂದು ಜನರು ಕೇಳುತ್ತಿದ್ದಾರೆ ಎಂದರು.
ಈ ಸಮುದಾಯಕ್ಕೆ ಮೂಲಭೂತ ಸೌಕರ್ಯ ಕೊಡುವ ಸಲುವಾಗಿ ಇರುವ ಹಣವನ್ನು ಸರಿಯಾಗಿ ಬಳಸದೆ, ಬೇರೆಡೆ ವರ್ಗಾಯಿಸಿ ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಇವತ್ತು ಬೆಳಿಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಸಮುದಾಯದ ಪ್ರಮುಖರು, ಶಾಸಕರು, ಮಾಜಿ ಶಾಸಕರ ಸಭೆ ನಡೆಸಲಾಗಿದೆ. ಪರಿಶಿಷ್ಟ ವರ್ಗಗಳ ವಾಲ್ಮೀಕಿ ಸಮುದಾಯದ ಎಲ್ಲ ಜಿಲ್ಲೆಗಳ ಮುಖಂಡರು ಭಾಗವಹಿಸಿದ್ದರು ಎಂದು ವಿವರಿಸಿದರು. ಅಲ್ಲಿ ಕೆಲವು ನಿರ್ಧಾರಗಳನ್ನು ಮಾಡಲಾಗಿದೆ ಎಂದರು.
ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಪ್ರತ್ಯೇಕ ಸಚಿವ- ಸಚಿವಾಲಯ ಬೇಕೆಂಬ ಬೇಡಿಕೆ ಇದ್ದು, ಈ ಸಂಬಂಧ ಮೊದಲನೇ ಸಭೆಯು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ನಡೆದು ನನ್ನನ್ನು ಮೊದಲನೇ ಸಚಿವನನ್ನಾಗಿ ಮಾಡಿತ್ತು ಎಂದು ವಿವರಿಸಿದರು. ಜೊತೆಗೆ ಮೀಸಲಾತಿಯನ್ನು ಶೇ 7ಕ್ಕೆ ಏರಿಸಲಾಗಿತ್ತು. ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯನ್ನು ಶೇ 17ಕ್ಕೆ ಏರಿಸಲಾಗಿತ್ತು ಎಂದು ವಿವರಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಪಕ್ಷದ ಮುಖಂಡ ರಾಮಚಂದ್ರ ಅವರು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರದಿಂದ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ: ಶೀಘ್ರವೇ ಹೆಚ್ಚಾಗಲಿದೆ ರೇಟ್
BREAKING: ಬೆಂಗಳೂರಲ್ಲಿ ನಮ್ಮ ‘ಮೆಟ್ರೋ ರೈಲು’ ಹಳಿಗಳ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ
 
		



 




