ಬೆಂಗಳೂರು : ಭಾರೀ ಮಳೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಾಮಾನ ಭಾರೀ ಕುಸಿತವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಳಿ ಹೆಚ್ಚಳವಾಗಿದೆ.
ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆ ಉಷ್ಣಾಂಶದಲ್ಲಿ ಭಾರೀ ಇಳಿಕೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಟ ತಾಪಮಾನದಲ್ಲಿ ಇಳಿಕೆ ದಾಖಲಾಗಿದೆ. ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಚಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳಗಿನ ಜಾವ ಪಾರ್ಕ್ ಗೆ ಬರುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ರಾಮನಗರ, ತುಮಕೂರು, ಬೀದರ್, ವಿಜಯಪುರ, ಕಲಬುರಗಿ, ಮಂಡ್ಯ, ಕೊಡಗು ಜಿಲ್ಲೆಯ ಹಲವಡೆ ತಾಪಮಾನ ಕುಸಿದಿದೆ.
ರಾಜ್ಯದ ಆರು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಶೀತದ ಅಲೆ ಮುಂದುವರಿಯಲಿದೆ, ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆ, ಮೋಡ ಇಲ್ಲದ ಕಾರಣ ಶುಭ್ರ ಆಕಾಶ, ಕನಿಷ್ಠ ಉಷ್ಣಾಂಶದಲ್ಲಿ ಸುಮಾರು 5 ಡಿಗ್ರಿ ಸೆಲ್ಸಿಯಸ್ ನಷ್ಟು ಇಳಿಕೆ, ಉತ್ತರ ದಿಕ್ಕಿನಿಂದ ದಕ್ಷಿಣಕ್ಕೆ ಗಾಳಿ ಬೀಸುತ್ತಿರುವುದರಿಂದ ಉತ್ತರ ಒಳನಾಡಿನ ಆರು ಜಿಲ್ಲೆಗಳಲ್ಲಿ ಶೀತ ಅಲೆ ಕಾಣಿಸಿಕೊಂಡಿದೆ. ಹೀಗಾಗಿ ಯಾದಗಿರಿ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಲ್ಯಾಣ ಕರ್ನಾಟಕದಲ್ಲಿ ಕಳೆದ ಒಂದು ದಶಕದಿಂದ ದಾಖಲಾಗದಿದ್ದ ಕನಿಷ್ಠ ಉಷ್ಣಾಂಶ ಈ ವರ್ಷ ಡಿ.18ರಂದು ದಾಖಲಾಗಿದೆ. ಬುಧವಾರ ಬೆಳಗ್ಗೆ ಕಲಬುರಗಿಯಲ್ಲಿ10.5 ಡಿಗ್ರಿ ಸೆಲ್ಸಿಯಸ್, ಬೀದರ್ನಲ್ಲಿ9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಲ್ಯಾಣ ಕರ್ನಾಟಕದ ಬಳ್ಳಾರಿ ಹೊರತುಪಡಿಸಿ ಎಲ್ಲ ಜಿಲ್ಲೆಗಳ ಉಷ್ಣಾಂಶ 12ಕ್ಕಿಂತ ಕೆಳಗೆ ಇಳಿದಿರುವುದು ಕಂಡು ಬಂದಿದೆ.