ಬೆಂಗಳೂರು: ಅನಧಿಕೃತ ಶಾಲೆಗಳಿಗೆ ವಿದ್ಯಾರ್ಥಿಗಳು ದಾಖಲಾಗದಂತೆ ನೋಡಿಕೊಳ್ಳಲು 2023-24ನೇ ಶೈಕ್ಷಣಿಕ ವರ್ಷದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮೂರು ಸುತ್ತೋಲೆ ಹೊರಡಿಸಿದೆ. ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ, ಅನಧಿಕೃತ ಶಾಲೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿ, ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಿ ಅಲ್ಲಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯದಂತೆ ನಿರ್ಬಂಧಿಸಬೇಕು. ಈ ಜವಾಬ್ದಾರಿ ಇಲಾಖೆಯ ಸ್ಥಳೀಯ ಅಧಿಕಾರಿಗಳದ್ದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.
ಇನ್ನೂ ಇದೇ ವೇಳೆ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ರಾಜ್ಯ ಸರ್ಕಾರವು ಮಕ್ಕಳಿಗೆ ಮೂಲ ಸೌಕರ್ಯದೊಂದಿಗೆ ಉತ್ತಮ ಕಲಿಕೆಯನ್ನು ನೀಡುವ ಗುರಿಯನ್ನು ಹೊಂದಿದೆ. ಅದರಂತೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೊಠಡಿಗಳ ನಿರ್ಮಾಣಕ್ಕೆ ರೂಪಿಸಲಾಗಿದ್ದ ʼವಿವೇಕʼ ಯೋಜನೆಯಡಿ ಮೂರನೇ ಕಂತಿನಲ್ಲಿ 12.49 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.