ಮುಂಬೈ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣ ಸಂಬಂಧ ಮುಂಬೈ ಪೊಲೀಸರು ಭಾನುವಾರ ಮುಂಜಾನೆ ಥಾಣೆಯಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಶಫೀಕುಲ್ ಇಸ್ಲಾಂ ಎಂದು ಗುರುತಿಸಲಾದ ಆರೋಪಿಯನ್ನು ನಗರದ ಲೇಬರ್ ಕ್ಯಾಂಪ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಆತ ಥಾಣೆಯಲ್ಲಿರುವ ರಿಕಿ ಬಾರ್‌ನಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮತ್ತು ತನ್ನ ಹೆಸರನ್ನು ವಿಜಯ್ ದಾಸ್ ಎಂದು ಇಟ್ಟುಕೊಂಡಿದ್ದ ಎಂದು ಪೊಲೀಸರು ವರದಿ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮುಂಬೈ ಪೊಲೀಸರು ಮಾಹಿತಿ ನೀಡಿದ್ದು, ಬಂಧಿತ ಆರೋಪಿ ಮೊಹಮ್ಮದ್ ಶರೀಫುಲ್ಲಾ ಇಸ್ಲಾಮ್ ಶೆಹಜಾದ್ ಆಗಿದ್ದು, ಈತ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾನೆ. ಸದ್ಯ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತ ಆರೋಪಿ ವಿಜಯ್ ದಾಸ್ ರೆಸ್ಟೋರೆಂಟ್ನಲ್ಲಿ ವೇಟರ್ ಆಗಿದ್ದು, ಈ ಅಪರಾಧವನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಗುರುವಾರ ಬೆಳಗಿನ ಜಾವ 2:30 ರ ಸುಮಾರಿಗೆ ಬಾಂದ್ರಾ ವೆಸ್ಟ್ ಅಪಾರ್ಟ್‌ಮೆಂಟ್‌ನಲ್ಲಿ ಸೈಫ್ ಅಲಿ ಖಾನ್ ಅವರ ಕುತ್ತಿಗೆ ಮತ್ತು ಭುಜ ಸೇರಿದಂತೆ ಆರು ಬಾರಿ ಇರಿತಕ್ಕೊಳಗಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಐದು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ನಂತರ ಅವರ ಬೆನ್ನುಮೂಳೆಯಿಂದ 2.5 ಇಂಚಿನ ಚಾಕು ತುಂಡನ್ನು ತೆಗೆದುಹಾಕಲಾಯಿತು.