ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಎನ್ಐಎ ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಆರೋಪಿಯು ತುಮಕೂರು ಮೂಲಕ ಬಳ್ಳಾರಿಗೆ ತೆರಳಿ, ಅಲ್ಲಿಂದ ಬೆಳಗಾವಿಗೆ ಹೋಗಿ, ಎಸ್ಕೇಪ್ ಆಗಿರೋ ಮಾಹಿತಿಯನ್ನು ಪತ್ತೆ ಹಚ್ಚಿದ್ದಾರೆ.
ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಸ್ಪೋಟಕ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಮೂಲಕ ರಾಮೇಶ್ವರಂ ಕೆಫೆಗೆ ತೆರಳಿದ್ದಂತ ಬಾಂಬರ್, ಅಲ್ಲಿ ಬಾಂಬ್ ಇಟ್ಟು ಟೈಮರ್ ಮೂಲಕ ಸ್ಪೋಟಿಸಿ ಪರಾರಿಯಾಗಿದ್ದನು. ಆತನ ಪತ್ತೆಗಾಗಿ ಈಗಾಗಲೇ ರೇಖಾ ಚಿತ್ರ, ಪೋಟೋ ಬಿಡುಗಡೆ ಮಾಡಿರುವಂತ ಎನ್ಐಎ ಅಧಿಕಾರಿಗಳು, ಆತನ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ಕೂಡ ಘೋಷಣೆ ಮಾಡಿದ್ದಾರೆ.
ತುಮಕೂರು, ಬಳ್ಳಾರಿ ಮೂಲಕ ಎಸ್ಕೇಪ್
ಬೆಂಗಳೂರಲ್ಲಿ ಬಾಂಬ್ ಸ್ಪೋಟಿಸಿದ ಬಳಿಕ ಬಾಂಬರ್ ತುಮಕೂರು ಮೂಲಕ ಬಳ್ಳಾರಿಗೆ ತೆರಳಿರೋ ಮಾಹಿತಯನ್ನು ಎನ್ಐಎ ಪತ್ತೆ ಹಚ್ಚಿದ್ದಾರೆ. ಈ ಕಾರಣದಿಂದಾಗಿಯೇ ಬಳ್ಳಾರಿ, ತುಮಕೂರಿನ ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ ವೀಡಿಯೋಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಬಳ್ಳಾರಿಯ ಕೇಂದ್ರ ಬಸ್ ನಿಲ್ದಾಣಕ್ಕೆ ನಿನ್ನೆ ತಡರಾತ್ರಿಯೇ ದಾಳಿಯಿಟ್ಟಿರುವಂತ ಎನ್ಐಎ ಅಧಿಕಾರಿಗಳ ತಂಡವು, ಶಂಕಿತ ಉಗ್ರನ ಮಾಹಿತಿಯನ್ನು ಪರಿಶೀಲನೆ ನಡೆಸಿದೆ. ಬಳ್ಳಾರಿಯ ಕೇಂದ್ರ ಬಸ್ ನಿಲ್ದಾಣದಲ್ಲಿನ 10ಕ್ಕೂ ಹೆಚ್ಚು ಸಿಸಿಟಿವಿ ವೀಡಿಯೋಗಳನ್ನು ಪರಿಶೀಲನೆ ನಡೆಸಿದ್ದಾರೆ.
ಬಾಂಬರ್ ಹೊರ ರಾಜ್ಯದವನು, ಹಿಂದಿಯಲ್ಲಿ ಮಾತು
ಸತತ 9 ಗಂಟೆಯವರೆಗೆ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಎನ್ಐಎ ಹಾಗೂ ಬಳ್ಳಾರಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಜಾಲಾಡಿದ್ದಾರೆ. ಅಲ್ಲಿನ ಸಿಸಿಟಿವಿ ಚಹರೆ ಆಧರಿಸಿ, ಆರೋಪಿಯು ಹೊರ ರಾಜ್ಯಗಳಿಗೆ ಎಸ್ಕೇಪ್ ಆಗಿರೋ ಮಾಹಿತಿಯನ್ನು ಕಲೆಹಾಕಿದ್ದಾರೆ.
ಬಳ್ಳಾರಿಯಿಂದ ಬೀದರ್ ಮೂಲಕ ಹೊರ ರಾಜ್ಯಗಳಿಗೆ ಬಾಂಬರ್ ಎಸ್ಕೇಪ್ ಆಗಿರೋದಾಗಿ ಎನ್ಐಎ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಜೊತೆಗೆ ಆತ ಹಿಂದಿಯನ್ನು ಮಾತನಾಡುತ್ತಿದ್ದಂತ ಮಾಹಿತಿಯನ್ನು ಕಲೆ ಹಾಕಿ, ಬಾಂಬರ್ ಬಂಧನಕ್ಕೆ ಬಲೆ ಬೀಸಿದ್ದಾರೆ.
‘ಪುನೀತ್ ರಾಜಕುಮಾರ್’ ಹೆಸರಲ್ಲಿ ರಾಜ್ಯಾದ್ಯಂತ ‘ಹೃದಯ ಜ್ಯೋತಿ’ ಯೋಜನೆ ಪ್ರಾರಂಭ : ದಿನೇಶ್ ಗುಂಡೂರಾವ್
ಲೋಕಸಭಾ ಚುನಾವಣೆ: ಇನ್ನೂ 2- 3 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ- ಸಿಎಂ ಸಿದ್ದರಾಮಯ್ಯ