ಚಿತ್ರದುರ್ಗ : ಗೃಹಲಕ್ಷ್ಮಿ ಯೋಜನೆ ಜೂನ್ ತಿಂಗಳ ಹಣ ಬಿಡುಗಡೆಯಾಗಿದ್ದು, ಕೆಲವರಿಗೆ ಇನ್ನೂ ಖಾತೆಗೆ ಜಮೆ ಆಗಿಲ್ಲ. ಹೀಗಾಗಿ ಶೀಘ್ರವೇ ಜೂನ್ ತಿಂಗಳ ಜೊತೆಗೆ ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣವನ್ನು ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾನಾಡಿರುವ ಲಕ್ಷ್ಮಿ ಹೆಬ್ಬಾಳ್ಕಾರ್ ಹಣವನ್ನ ಬಿಡುಗಡೆ ಮಾಡಿದ್ದೇವೆ. ಕೆಲವೊಬ್ಬರಿಗೆ ಹಣ ಬಂದಿದೆ. ಕೆಲವೊಬ್ಬರಿಗೆ ಹಣ ಬಂದಿಲ್ಲ. ಸದ್ಯ ಎಲ್ಲಾ ಖಾತೆಗಳಿಗೂ ಹಣ ಹಾಕಲು ಎಲ್ಲಾ ಪ್ರಕ್ರಿಯೆಗಳನ್ನ ಮಾಡಲಾಗುತ್ತಿದೆ. ಸದ್ಯ ಒಂದು ತಿಂಗಳ ಹಣವನ್ನ ಹಾಕಿದ್ದೇವೆ. ಶೀಘ್ರವೇ 2 ತಿಂಗಳ ಹಣವನ್ನು ಒಟ್ಟಿಗೆ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಇದುವರೆಗೂ ಜೂನ್ ಮಾಹೆಯವರೆಗಿನ ಗೃಹಲಕ್ಷ್ಮೀ ಹಣವನ್ನು ಜಮೆ ಮಾಡಲಾಗಿದೆ. ಬಾಕಿ ಇರುವ ಜುಲೈ ಹಾಗೂ ಆಗಸ್ಟ್ ತಿಂಗಳ ಹಣವನ್ನು 5 ರಿಂದ 10 ದಿನದೊಳಗೆ ಜಮೆ ಮಾಡುವುದಾಗಿ ಹೇಳಿದರು.
ಗೃಹಲಕ್ಷ್ಮೀ ಯೋಜನೆಯಡಿ ಇದುವರೆಗೂ ರೂ.26,260 ಕೋಟಿ ಹಣ ಮಹಿಳೆಯರ ಖಾತೆಗೆ ಜಮೆ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯ ಹಣ, ದೇಶದ ಸಣ್ಣ ಪುಟ್ಟ ರಾಜ್ಯಗಳ ವಾರ್ಷಿಕ ಆಯವ್ಯಯಕ್ಕೆ ಸಮನಾಗಿದೆ ತಿಳಿಸಿದರು.
ಯೋಜನೆ ಲಾಭ ಪಡೆದ ಮಹಿಳೆಯರು ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಮೂಲಕ ಹಿಮ್ಮಾಯಿತಿ ನೀಡಬಹುದು. ಫೇಸ್‍ಬುಕ್, ಯುಟ್ಯೂಬ್, ಇನ್ಸ್ಟಾಗ್ರಾಂ ಮೂಲಕ ಅಭಿಪ್ರಾಯವನ್ನು ರೀಲ್ಸ್ ವಿಡಿಯೋ ಮೂಲಕ ವ್ಯಕ್ತಪಡಿಸಲು ಕೋರಿದ್ದು, ಅತ್ಯುತ್ತಮ ವಿಡಿಯೋ ರೀಲ್ಸ್‍ಗೆ ಬಹುಮಾನ ನೀಡುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಿಸಿದರು.
ಪಿಂಚಣಿ ಅದಾಲತ್ ನಡೆಸಿ: ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ, ಅಂಗವಿಕಲರ ಮಾಸಾಶನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳು ಅರ್ಹರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪಿಂಚಣಿ ಅದಾಲತ್ ನಡೆಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ 3-4 ತಿಂಗಳಿಂದ ಮಾಸಾಶನ ಬರುತ್ತಿಲ್ಲ ಎಂದು ದೂರುಗಳಿದ್ದು, ಈ ಹಿನ್ನಲೆಯಲ್ಲಿ ಪಿಂಚಣಿ ಹಣ ಅರ್ಹರಿಗೆ ಸಮರ್ಪಕವಾಗಿ ವಿತರಣೆಗೆ ಕ್ರಮವಹಿಸಬೇಕು. ಕಾಲಕಾಲಕ್ಕೆ ಪಿಂಚಣಿ ಅದಾಲತ್ ನಡೆಸಿ, ಅವರ ಸಮಸ್ಯೆಗಳನ್ನು ಬಗೆಹರಿಸಬೇಕು. ಅಂಗವಿಕಲರು, ವಯೋವೃದ್ಧರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು.
ಗೃಹಲಕ್ಷ್ಮಿ ಹಣ ಖಾತೆಗೆ ಹಾಕುವ ಪ್ರಕ್ರಿಯೆ 15 ದಿನಗಳಿಂದ ಆರಂಭವಾಗಿದ್ದು, ಇನ್ನು 15 ದಿನಗಳಲ್ಲಿ ಎಲ್ಲರ ಖಾತೆಗೆ ಹಣ ಜಮಾವಣೆಯಾಗಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.