ನವದೆಹಲಿ: ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದೀಗ ಏಮ್ಸ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.
ಏಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ಎಲ್.ಕೆ. ಅಡ್ವಾಣಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಸದ್ಯ ಅವರನ್ನು ತೀವ್ರ ನಿಗ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೃದ್ಧಾಪ್ಯ ವಿಭಾಗದ ವೈದ್ಯರ ಮೇಲ್ವೀಚಾರಣೆಯಲ್ಲಿ ಅವರನ್ನು ಇಟ್ಟು ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿಸಿದೆ.
ಎಲ್.ಕೆ.ಅಡ್ವಾಣಿ ಅವರು ಜೂನ್ 2002 ರಿಂದ ಮೇ 2004 ರವರೆಗೆ ಭಾರತದ ಉಪ ಪ್ರಧಾನಿಯಾಗಿ ಮತ್ತು ಅಕ್ಟೋಬರ್ 1999 ರಿಂದ ಮೇ 2004 ರವರೆಗೆ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 1986 ರಿಂದ 1990, 1993 ರಿಂದ 1998 ಮತ್ತು 2004 ರಿಂದ 2005 ರವರೆಗೆ ಅನೇಕ ಬಾರಿ ಬಿಜೆಪಿ ಅಧ್ಯಕ್ಷರಾಗಿದ್ದರು.