ಹಾವೇರಿ : ಜಮೀನಿನ ಪಹಣಿಯಲ್ಲಿ ‘ವಕ್ಫ್’ ಹೆಸರು ನಮೂದು ಆಗಿದ್ದಕ್ಕೆ ಹಾವೇರಿಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಹಾವೇರಿ ಎಸ್ ಪಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಹಾವೇರಿ ಜಿಲ್ಲೆಯ ಹರಣಗಿ ಗ್ರಾಮದ ರೈತ ಚನ್ನಪ್ಪ ಎಂಬುವವರ ಪುತ್ರ ರುದ್ರಪ್ಪ ಎಂಬ ರೈತ, 08 ವರ್ಷಗಳ ಹಿಂದೆ, 04 ಏಕರೆ ಹೊಲದ ಪಹಣಿಯಲ್ಲಿ ವಕ್ಷ ಹೆಸರು ಬಂದಿರುವದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಹಾವೇರಿ ರೈತರು ಆರೋಪಿಸಿದ್ದಾರೆಂದು ವರದಿ ಪ್ರಕಟ ಮಾಡಿರುತ್ತಾರೆ. ಆದರೆ ಮೃತ ರುದ್ರಪ್ಪ ತಂದೆ ಚನ್ನಪ್ಪ ಬಾಳಿಕಾಯಿ ಇತನು ತಮ್ಮ ಆಸ್ತಿಯ ಪಹಣಿಯಲ್ಲಿ ವಕ್ಷ ಅಂತಾ ನಮೂದು ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಅಂತಾ ಯಾವುದೇ ರೀತಿ ಪ್ರಕರಣ ದಾಖಲಾಗಿರುವದಿಲ್ಲ.
ದಿನಾಂಕ: 06.01.2022 ರಂದು ರುದ್ರಪ್ಪ ತಂದೆ ಚನ್ನಪ್ಪ ಬಾಳಿಕಾಯಿ, ವಯಾ: 24 ವರ್ಷ, ಸಾ| ಹರಣಗಿರಿ ಗ್ರಾಮ, ಹಾನಗಲ್ ತಾಲೂಕ, ಇವರು ಐಸಿಐಸಿಐ ಬ್ಯಾಂಕ್ ಹಾವೇರಿ ಶಾಖೆಯಲ್ಲಿ 03 ಲಕ್ಷ ಹಾಗೂ ಖಾಸಗಿಯಾಗಿ 04 ಲಕ್ಷ ರೂಪಾಯಿ ಕೈಗಡ ಸಾಲ ಮಾಡಿಕೊಂಡಿದ್ದು, ಅತೀ ಹೆಚ್ಚು ಮಳೆಯಾಗಿ ಬೆಳೆ ಹಾನಿಯಾಗಿದ್ದರಿಂದ ಮನ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಅಂತಾ ಇವರ ತಂದೆ ಚನ್ನಪ್ಪ ಬಾಳಿಕಾಯಿ, ಇವರು ವರದಿ ಕೊಟ್ಟಿದ್ದು, ಆಡೂರ ಪೊಲೀಸ್ ಠಾಣೆ ಯುಡಿಆರ್ ಸಂಖ್ಯೆ: 03/2022, ಕಲಂ: 174 ಸಿಆರ್‌ಪಿಸಿ ಪ್ರಕಾರ ಯುಡಿಆರ್ ದಾಖಲಿಸಿಕೊಂಡಿದ್ದು ಇರುತ್ತದೆ. ಅದರಲ್ಲಿ ತಮ್ಮ ಆಸ್ತಿಯಲ್ಲಿ ವಕ್ಸ್ ಅಂತಾ ನಮೂದಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಅಂತಾ ಯಾವುದೇ ರೀತಿ ನಮೂದಿಸಿರುವದಿಲ್ಲ.
ಸದರಿ ಮೃತನ ಬಗ್ಗೆ ಪಿಎಸ್‌ಐ ಆಡೂರ ರವರು ತನಿಖೆ ಕೈಗೊಂಡು, ಆತನು ಬೆಳೆ ಹಾನಿಯಾಗಿದ್ದರಿಂದ ಸಾಲ ಮಾಡಿದ್ದಕ್ಕೆ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಅಂತಾ ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಅಂತಿಮ ವರದಿಯನ್ನು ತಹಶೀಲ್ದಾರ ಹಾನಗಲ್ ರವರಿಗೆ ಸಲ್ಲಿಸಿರುತ್ತಾರೆ. ಸದರಿ ಮೃತನ ಕುಟುಂಬಕ್ಕೆ ಸರ್ಕಾರದಿಂದ 05 ಲಕ್ಷ ರೂಪಾಯಿ ಪರಿಹಾರ ಒದಗಿಸಲಾಗಿರುತ್ತದೆ.
ಜಮೀನಿನ ಪಹಣಿಯಲ್ಲಿ ‘ವಕ್ಫ್’ ಹೆಸರು ನಮೂದು ಆಗಿದ್ದಕ್ಕೆ ಹಾವೇರಿಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯನ್ನು ನಮ್ಮ ಕನ್ನಡ ನ್ಯೂಸ್ ನೌ ಸೇರಿ ಕೆಲವು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿತ್ತು. ಆದರೆ ರೈತ ರುದ್ರಪ್ಪ ವಕ್ಫ್ ನೋಟಿಸ್ ನಿಂದ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದ್ದು, ತಪ್ಪು ಮಾಹಿತಿ ಪ್ರಸಾರ ಮಾಡಿದ್ದಕ್ಕಾಗಿ ನಾವು ವಿಷಾದ ವ್ಯಕ್ತಪಡಿಸುತ್ತಿದ್ದೇವೆ.