ಬೆಂಗಳೂರು : ರೇಷನ್ ಕಾರ್ಡ್ ಹೊಂದಿರುವ ಹಾಗೂ ರೇಷನ್ ಕಾರ್ಡ್ ನಲ್ಲಿ ಹೊಸದಾಗಿ ಹೆಸರು ಸೇರಿಸಲು ಕಾಯುತ್ತಿರುವ ರಾಜ್ಯದ ಜನತೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಮಹತ್ವದ ಅಪ್ಡೇಟ್ ಪ್ರಕಟವಾಗಿದೆ. 2026ನೇ ಸಾಲಿನ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮಾರ್ಚ್ 31 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.
ಏನೆಲ್ಲಾ ತಿದ್ದುಪಡಿ ಮಾಡಬಹುದು?
ನಿಮ್ಮ ಪಡಿತರ ಚೀಟಿಯಲ್ಲಿ ಆಧಾರ್ ಕಾರ್ಡ್ಗೆ ಅನುಗುಣವಾಗಿ ಈ ಕೆಳಗಿನ ಬದಲಾವಣೆಗಳನ್ನು ಮಾಡಿಕೊಳ್ಳಬಹುದು:
ಹೆಸರಿನ ಕಾಗುಣಿತ (Spelling) ಸರಿಪಡಿಸುವುದು.
ಹೊಸದಾಗಿ ಜನಿಸಿದ ಮಗು ಅಥವಾ ಮದುವೆಯಾಗಿ ಬಂದ ಸೊಸೆಯ ಹೆಸರನ್ನು ಸೇರಿಸುವುದು.
ಮರಣ ಹೊಂದಿದವರ ಹೆಸರನ್ನು ಕಾರ್ಡ್ನಿಂದ ತೆಗೆದುಹಾಕುವುದು.
ವಿಳಾಸ ಬದಲಾವಣೆ ಹಾಗೂ ಮೊಬೈಲ್ ಸಂಖ್ಯೆ ಜೋಡಣೆ.
ಎಪಿಎಲ್ (APL) ನಿಂದ ಬಿಪಿಎಲ್ (BPL) ಕಾರ್ಡ್ಗೆ ಬದಲಾವಣೆ ಮಾಡಿಕೊಳ್ಳುವುದು.
ನಿಮಗೆ ಹತ್ತಿರವಿರುವ ನ್ಯಾಯಬೆಲೆ (ರೇಷನ್) ಅಂಗಡಿಯನ್ನು ಬದಲಾಯಿಸಿಕೊಳ್ಳುವುದು.
ಅಗತ್ಯ ದಾಖಲೆಗಳು:
ಅರ್ಜಿ ಸಲ್ಲಿಸಲು ಅಥವಾ ತಿದ್ದುಪಡಿ ಮಾಡಲು ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿದೆ:
ಮೂಲ ರೇಷನ್ ಕಾರ್ಡ್: (ತಿದ್ದುಪಡಿ ಮಾಡುವುದಿದ್ದರೆ ಹಳೆಯ ಕಾರ್ಡ್ ನಕಲು).
ಆಧಾರ್ ಕಾರ್ಡ್: ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಪ್ರತಿಗಳು.
ಪ್ರಮಾಣ ಪತ್ರಗಳು: ಹೊಸ BPL ಕಾರ್ಡ್ಗೆ ಅರ್ಜಿ ಸಲ್ಲಿಸುವವರಾಗಿದ್ದರೆ, ಚಾಲ್ತಿಯಲ್ಲಿರುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ.
ಜನನ/ಮರಣ ಪ್ರಮಾಣ ಪತ್ರ: ಹೊಸ ಮಗುವಿನ ಹೆಸರು ಸೇರಿಸಲು ಜನನ ಪ್ರಮಾಣ ಪತ್ರ ಹಾಗೂ ಮೃತಪಟ್ಟವರ ಹೆಸರು ತೆಗೆಯಲು ಮರಣ ಪ್ರಮಾಣ ಪತ್ರ.
ಫೋಟೋ ಮತ್ತು ಮೊಬೈಲ್ ಸಂಖ್ಯೆ: ಕುಟುಂಬದ ಮುಖ್ಯಸ್ಥರ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಆಧಾರ್ಗೆ ಲಿಂಕ್ ಆಗಿರುವ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ.
ಅರ್ಜಿ ಸಲ್ಲಿಕೆ ಹೇಗೆ?
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ನೀವೇ ಖುದ್ದಾಗಿ ಅರ್ಜಿ ಸಲ್ಲಿಸಬಹುದು. ಆಫ್ಲೈನ್ ಮೂಲಕ ಮಾಡಿಸುವುದಾದರೆ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿ ತಿದ್ದುಪಡಿ ಮಾಡಿಸಬಹುದು.
ವಿಶೇಷ ಸೂಚನೆ: ಆನ್ಲೈನ್ನಲ್ಲಿ ಸರ್ವರ್ ಸಮಸ್ಯೆ ಎದುರಾದರೆ ಮುಂಜಾನೆ ಅಥವಾ ರಾತ್ರಿ 8 ಗಂಟೆಯ ನಂತರ ಅರ್ಜಿ ಸಲ್ಲಿಸುವುದು ಉತ್ತಮ. ಅರ್ಜಿ ಸಲ್ಲಿಸಿದ ನಂತರ ಸಿಗುವ ಸ್ವೀಕೃತಿ ಪತ್ರವನ್ನು (Acknowledgment Receipt) ಕಡ್ಡಾಯವಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳಿ. ಅರ್ಜಿ ಸ್ಥಿತಿಯನ್ನು (Application Status) ಪರಿಶೀಲಿಸಲು ಇದು ಅತ್ಯಗತ್ಯವಾಗಿದೆ.
ಕಾರ್ಡ್ ಯಾವಾಗ ಕೈ ಸೇರಲಿದೆ?
ಅರ್ಜಿ ಸಲ್ಲಿಸಿದ 15 ರಿಂದ 30 ದಿನಗಳ ಒಳಗಾಗಿ ಪರಿಷ್ಕೃತ ಅಥವಾ ಹೊಸ ರೇಷನ್ ಕಾರ್ಡ್ ನಿಮ್ಮ ಕೈ ಸೇರಲಿದೆ. ತುರ್ತು ಅಗತ್ಯವಿದ್ದಲ್ಲಿ ಪ್ರಕ್ರಿಯೆಗಳು ಪೂರ್ಣಗೊಂಡ 7 ರಿಂದ 10 ದಿನಗಳಲ್ಲಿ ಲಭ್ಯವಾಗಲಿದೆ.
ರೇಷನ್ ಕಾರ್ಡ್ ಕೇವಲ ಪಡಿತರ ಪಡೆಯಲಷ್ಟೇ ಸೀಮಿತವಾಗಿಲ್ಲ; ಸರ್ಕಾರದ ಗೃಹಲಕ್ಷ್ಮಿ, ಅನ್ನಭಾಗ್ಯ, ಆಯುಷ್ಮಾನ್ ಭಾರತ್ (ಉಚಿತ ಚಿಕಿತ್ಸೆ) ನಂತಹ ಯೋಜನೆಗಳ ಜೊತೆಗೆ ಪಾಸ್ಪೋರ್ಟ್, ಬ್ಯಾಂಕ್ ಖಾತೆ, ಹಾಗೂ ವಿದ್ಯಾರ್ಥಿ ವೇತನ ಪಡೆಯಲು ಇದು ಪ್ರಮುಖ ದಾಖಲೆಯಾಗಿದೆ. ಆದ್ದರಿಂದ, ದಾಖಲೆಗಳಲ್ಲಿ ಯಾವುದೇ ತಪ್ಪುಗಳಿದ್ದರೂ ಕೂಡಲೇ ಸರಿಪಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.








