ಬೆಂಗಳೂರು: ಕಾನೂನಿನ ಪ್ರಕಾರ ಕುಮ್ಕಿ ಜಮೀನನ್ನು ಮಂಜೂರು ಮಾಡಲು ಸಾಧ್ಯವಿಲ್ಲ. ಆದ್ರೆ, ಕುಮ್ಕಿ ಜಮೀನಿನಲ್ಲಿ ಬಡವರು ನಿರ್ಮಿಸಿಕೊಂಡಿರುವ ಮನೆಗಳ ತೆರವು ಕಾರ್ಯಾಚರಣೆಯೂ ಅಸಾಧ್ಯ. ಹೀಗಾಗಿ ಅಂತಹ ಪ್ರಕರಣವನ್ನು ಸರ್ಕಾರ ವಿಶೇಷ ದೃಷ್ಟಿಯಿಂದಲೇ ನೋಡಬೇಕಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಸೋಮವಾರ ಬಿಜೆಪಿ ನಾಯಕ ವಿ. ಸುನೀಲ್ ಕುಮಾರ್ ಕುಮ್ಕಿ ಜಮೀನಿನ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದರು. “ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕುಮ್ಕಿ ಜಮೀನಿನ ಸಮಸ್ಯೆ ಉಲ್ಬಣಿಸಿದ್ದು, ಸ್ವಾಧೀನದಲ್ಲಿರುವ ಕುಮ್ಕಿ ಜಮೀನಿನನ್ನು ಕಲಂ ನಮೂನೆ 53-57 ಹಾಗು 93 ಸಿಸಿ ಪ್ರಕಾರ ಮಂಜೂರು ಮಾಡಬೇಕು” ಎಂದು ಮನವಿ ಮಾಡಿದರು.
ಕುಮ್ಕಿ ಜಮೀನಿನ ಮಂಜೂರಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಕಾನೂನಿನ ಪ್ರಕಾರ ಕುಮ್ಕಿ ಜಮೀನನ್ನು ಯಾರಿಗೂ ಮಂಜೂರು ಮಾಡುವುದು ಸಾಧ್ಯವಿಲ್ಲ. ಆಗುತ್ತೆ, ನೋಡೋಣ ಎಂದು ಜನರಿಗೆ ತಪ್ಪು ಮಾಹಿತಿ ಅಥವಾ ತಪ್ಪು ನಿರೀಕ್ಷೆಗಳನ್ನು ನೀಡಲು ನಾವು ಸಿದ್ದರಿಲ್ಲ. ಕಹಿಯಾದರೂ ಸತ್ಯವನ್ನು ಹೇಳಲೇಬೇಕು. ಕುಮ್ಕಿ ಜಮೀನನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂಬುದೇ ಸತ್ಯ” ಎಂದು ಪುನರುಚ್ಚರಿಸಿದರು.
“ಕುಮ್ಕಿ ಜನೀನನ್ನು ಮಂಜೂರು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಸಂಪುಟ ಉಪ ಸಮಿತಿ ಸಭೆ ರಚನೆ ಮಾಡಿತ್ತು. ಈ ಸಭೆ ದೀರ್ಘ ಚರ್ಚೆ ನಡೆಸಿದ ನಂತರ ಕುಮ್ಕಿ ಜಮೀನನ್ನು ಮಂಜೂರು ಮಾಡುವುದು ಸಾಧ್ಯವಿಲ್ಲ ಎಂದು ಈ ವಿಚಾರವನ್ನೇ ಕೈಬಿಟ್ಟಿತ್ತು” ಎಂಬ ಮಾಹಿತಿಯನ್ನು ಅವರು ಸದನಕ್ಕೆ ನೀಡಿದರು.
ಮುಂದುವರೆದು, “ಕೆಎಲ್‌ಆರ್ ಆಕ್ಟ್ ರೂಲ್ 79ರ ಪ್ರಕಾರ ಕುಮ್ಕಿ ಪ್ರದೇಶವನ್ನು ಉಪಯೋಗ ಮಾಡಿಕೊಳ್ಳುವ ಹಕ್ಕನ್ನು ಜನರಿಗೆ ನೀಡಲಾಗಿದೆ. ಜಮೀನಿಗೆ ಹೊಂದಿಕೊಂಡಿರುವ ಕಾಡಿನ ಭಾಗದ ಉಪ ಉತ್ಪನ್ನಗಳನ್ನು ಬಳಕೆ ಮಾಡಿಕೊಳ್ಳುವ ಹಕ್ಕನ್ನು ನೀಡಲಾಗಿದೆ. ಆದರೆ, ಆ ಜಾಗಗಳನ್ನು ಮಂಜೂರು ಮಾಡಲಾಗುವುದಿಲ್ಲ ಎಂಬ ಅಂಶ ಕಾನೂನಿನಲ್ಲಿ ಸ್ಪಷ್ಟವಾಗಿದೆ. ಹೀಗಾಗಿ ಕುಮ್ಕಿ ಜಮೀನನ್ನು ಕನಿಷ್ಠ ಭೋಗ್ಯಕ್ಕೆ ನೀಡುವುದಾದರೂ ಸಾಧ್ಯವಿದೆಯಾ ಎಂಬ ಕುರಿತು ಗಂಭೀರವಾಗಿ ಪರಿಶೀಲಿಸಲಾಗುವುದು” ಎಂದು ಸ್ಪಷ್ಟೀಕರಣ ನೀಡಿದರು.
BREAKING : ಬೆಳಗಾವಿಯಲ್ಲಿ ಭೀಕರ ಮರ್ಡರ್ : ಮಾರಾಕಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ
ನಾನು ಎನ್ನುವುದು ಅಹಂಕಾರ, ನಾವು ಎನ್ನುವುದು ಸಂಸ್ಕಾರ: ಡಿಕೆಶಿ ಕುಟುಕಿದ ಕೇಂದ್ರ ಸಚಿವ HDK