ಬೆಂಗಳೂರು: ಇಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಬೆಂಗಳೂರಿನ ಪೂರ್ವ ತಾಲ್ಲೂಕಿನ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು. ಈ ವೇಳೆಯಲ್ಲಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಂತ 11 ಅಧಿಕಾರಿ, ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಬಿಗ್ ಶಾಕ್ ನೀಡಿದ್ದಾರೆ.
ಈ ಸಂಬಂಧ ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅವರು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ. ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿಯ ಗ್ರೂಪ್ ಡಿ ಎನ್ ಆರ್ ಮಂಜುನಾಥ, ಗ್ರಾಮ ಆಡಳಿತಾಧಿಕಾರಿ ಲಕ್ಷ್ಮೀದೇವಿ, ಎಸ್ ಡಿಎ ಬಾಲಕೃಷ್ಣ,ಡಿ, ರಕ್ಷಿತ್.ಎನ್, ಎಫ್ ಡಿಎ ಜ್ಞಾನ ಶೇಖರ್.ಎ, ಕೆ.ಪ್ರವೀಣ, ಆಹಾರ ವಿಭಾಗದ ಶಿರಸ್ತೇದಾರರಾದ ಚಂದ್ರಮ್ಮ ಸಿ, ಇಡಬ್ಲ್ಯೂ ವಿಭಾಗದ ಶಿರಸ್ತೆದಾರರಾದ ಅತಿಕ್ ಜಮೀಲ್ ಖಾನ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.
ಇದಲ್ಲದೇ ಬೆಂಗಳೂರು ಪೂರ್ವ ತಾಲ್ಲೂಕಿನ ತಹಶೀಲ್ದಾರರಾದಂತ ಬಿಎಸ್ ರಾಜೀವ್ ಕೂಡ ಕಂದಾಯ ಸಚಿವರು ತಾಲ್ಲೂಕು ಕಚೇರಿಗೆ ಭೇಟಿ ನೀಡಿದಂತ ಸಂದರ್ಭದಲ್ಲಿ ಕರ್ತವ್ಯಕ್ಕೆ ಗೈರಾಗಿದ್ದಕ್ಕೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ತಹಶೀಲ್ದಾರ್ ಗ್ರೇಡ್-2 ಶೇಖರ್.ಆರ್, ವಿಶೇಷ ತಹಶೀಲ್ದಾರ್ ಮಹೇಶ್ ಎಸ್ ಆರ್ ಅವರಿಗೂ ನೋಟಿಸ್ ನೀಡಲಾಗಿದೆ.
ಏನಿದೆ ಕಾರಣ ಕೇಳಿ ನೀಡಿದ ನೋಟಿಸ್ ನಲ್ಲಿ.?
ದಿನಾಂಕ 30-10-2024ರಂದು ಕಂದಾಯ ಸಚಿವರು ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ ಸಮಯದಲ್ಲಿ ಕಚೇರಿಯ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದಾಗ ನೀವು ಹಾಜರಾತಿ ವಹಿಯಲ್ಲಿ ಸಹಿ ಮಾಡಿರುವುದಿಲ್ಲ. ಕರ್ತವ್ಯಕ್ಕೆ ಗೈರು ಹಾಜರಾಗಿರುವುದು ಹಾಗೂ ಚಲನ-ವಲನವಹಿಯಲ್ಲಿಯೂ ಸಹ ನಮೂದು ಮಾಡದೇ ಇರುವುದು ಕಂಡು ಬಂದಿರುತ್ತದೆ ಎಂದು ತಿಳಿಸಲಾಗಿದೆ.
ನೀವು ಒಬ್ಬ ಜವಾಬ್ದಾರಿಯುತ ಅಧಿಕಾರಿಯ ಹುದ್ದೆಯಲ್ಲಿದ್ದು, ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗುವುದಕ್ಕೆ ಕಾರಣರಾಗಿರುತ್ತೀರಿ. ಇದು ಸರ್ಕಾರಿ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ, ಬೇಜವಾಬ್ದಾರಿ ಹಾಗೂ ಉದಾಸೀನತೆಯಿಂದ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ ಎಂದಿದ್ದಾರೆ.
ಆದುದ್ದರಿಂದ ನಿಮ್ಮ ವಿರುದ್ಧ ಕೆಸಿಎಸ್ಆರ್ ನಿಯಮ 106(ಎ) ರಡಿ ನಿಯಮಾನುಸಾರ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಈ ಕಾರಣ ಕೇಳಿ ನೀಡಿರುವ ನೋಟಿಸು ತಲುಪಿದ 24 ಗಂಟೆಯ ಒಳಗೆ ನಿಮ್ಮ ಲಿಖಿತ ಸಮಜಾಯಿಸಿಯನ್ನು ಖುದ್ದು ಸಲ್ಲಿಸಬೇಕು. ತಪ್ಪಿದಲ್ಲಿ ನಿಮ್ಮ ಲಿಖಿತ ಸಮಜಾಯಿಸಿ ಏನೂ ಇಲ್ಲವೆಂದು ಭಾವಿಸಿ, ನಿಮ್ಮ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಎಚ್ಚರಿಸಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ಬೆಂಗಳೂರಲ್ಲಿ ಕಿಲ್ಲರ್ ‘BMTC ಬಸ್’ಗೆ ಮತ್ತೊಂದು ಬಲಿ: ಬೈಕ್ ಸವಾರ ಸ್ಥಳದಲ್ಲೇ ಸಾವು | BMTC Bus