ಬೆಂಗಳೂರು: ಪೆಟ್ರೋಲ್, ಡೀಸೆಲ್ ಏರಿಕೆಯ ಬೆನ್ನಲ್ಲೇ ರಾಜ್ಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ಟಿಕೆಟ್ ದರ ಏರಿಕೆ ಮಾಡುವ ಕುರಿತು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸುಳಿವು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೈಲ ಬೆಲೆ ಏರಿಕೆಯಿಂದ ಸಾಗಾಣಿಕೆ ವೆಚ್ಚ ಕೂಡ ಹೆಚ್ಚಾಗಿದೆ. ರಾಜ್ಯದಲ್ಲಿ ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ನಿಗಮಗಳಿಂದ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಬಂದ್ರೆ ಪರಿಶೀಲಿಸಿ ಕ್ರಮ ವಹಿಸಲಾಗುತ್ತದೆ ಎಂದರು.
ಕರ್ನಾಟಕದಲ್ಲಿ ಸಾರಿಗೆ ಬಸ್ ಟಿಕೆಟ್ ದರವನ್ನು 2020ರಲ್ಲಿ ಹೆಚ್ಚಳ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ KSRTC ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಲಾಗಿಲ್ಲ. ನಿಗಮಕ್ಕೆ ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರದಿಂದ 1100 ಕೋಟಿ ಬರಬೇಕಿದೆ. ಸಾರಿಗೆ ನಿಗಮಗಳಿಂದ ದರ ಪರಿಷ್ಕರಣೆ ಪ್ರಸ್ತಾವನೆ ಬಂದರೆ ಪರಿಶೀಲಿಸಿ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ದಾರೆ. ಈ ಮೂಲಕ ಕೆಲವೇ ದಿನಗಳಲ್ಲಿ ಕೆ ಎಸ್ ಆರ್ ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಆಗುವುದು ಖಚಿತ ಅನ್ನೋ ಸುಳಿವು ನೀಡಿದ್ದಾರೆ.







