ಬೆಂಗಳೂರು : ಕಾಂಗ್ರೆಸ್ ಸರ್ಕಾರದ ವಕ್ರ ದೃಷ್ಟಿ ಈಗ ರೈತರ ಮೇಲೆ ಬಿದ್ದಿದ್ದು, ಕುಮ್ಕಿ ಭೂಮಿಯನ್ನು ಭೋಗ್ಯಕ್ಕೆ ನೀಡಲು ಹೊರಟಿದೆ. ಎಕರೆಗೆ 1 ಸಾವಿರದಂತೆ ಬೆಲೆ ನಿಗದಿ ಮಾಡಿರುವ ಕಾಂಗ್ರೆಸ್ ಸಣ್ಣ ಹಿಡುವಳಿದಾರರಿಗೆ ದೊಡ್ಡ ಹೊಡೆತ ನೀಡಲು ಮುಂದಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಬೆಲೆ ಹೆಚ್ಚಳ, ಸರ್ಕಾರದ ಆಸ್ತಿ ಮಾರಾಟ ಸೇರಿದಂತೆ ಪರ್ಯಾಯ ಮಾರ್ಗ ಹುಡುಕುತ್ತಿರುವ ಸರ್ಕಾರ ಈಗ ಕುಮ್ಕಿ ಭೂಮಿಯನ್ನು ಭೋಗ್ಯಕ್ಕೆ ನೀಡಲು ಹೊರಟಿದೆ. ಎಕರೆಗೆ 1 ಸಾವಿರದಂತೆ ಬೆಲೆ ನಿಗದಿ ಮಾಡಿರುವ ಕಾಂಗ್ರೆಸ್ ಸಣ್ಣ ಹಿಡುವಳಿದಾರರಿಗೆ ದೊಡ್ಡ ಹೊಡೆತ ನೀಡಲು ನಿಂತಿದೆ ಎಂದು ತಿಳಿಸಿದೆ.
ಒಂದು ಅಂದಾಜಿನ ಪ್ರಕಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ಲಕ್ಷ ಕುಮ್ಕಿ ಭೂಮಿ ಹೊಂದಿದವರಿದ್ದಾರೆ. ಇದರಲ್ಲಿ 2.5 ಲಕ್ಷ ರೈತರು ಸಣ್ಣ ಹಿಡುವಳಿದಾರರು. ರೈತರಿಗೆ ನ್ಯಾಯವಾಗಿ ಸಿಗಬೇಕಾದ ಕುಮ್ಕಿ ಹಕ್ಕನ್ನು ಕಸಿಯುವ ಈ ರೈತ ವಿರೋಧಿ ಸುತ್ತೋಲೆಯನ್ನು ಈ ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದೆ.