ಬೆಂಗಳೂರು ಪೂರ್ವನಗರ ಪಾಲಿಕೆ ಕೆ.ಆರ್.ಪುರ ವಲಯ ವ್ಯಾಪ್ತಿಯಲ್ಲಿ ನಗರ ಪಾಲಿಕೆಗೆ ಒಂದಕ್ಕಿಂತಲೂ ಹೆಚ್ಚಿನ ವರ್ಷಗಳ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ಸ್ವತ್ತುಗಳ ಹರಾಜಿನ ಮೂಲಕ ಬಾಕಿ ಆಸ್ತಿ ತೆರಿಗೆ ವಸೂಲಾತಿಗೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಕೆ.ಆರ್ ಪುರ ವಲಯ ದ ಜಂಟಿ ಆಯುಕ್ತರಾದ ಡಾ. ಸುಧಾ ರವರು ತಿಳಿಸಿದರು.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2025ರ ಅಡಿಯಲ್ಲಿ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ತರಹದ ಸ್ವತ್ತುಗಳ ಮಾಲೀಕರು ಅಥವಾ ಅಧಿಭೋಗದಾರರ ಪ್ರತಿವರ್ಷ ಆಸ್ತಿತೆರಿಗೆ ಪಾವತಿಸುವುದು ಕಡ್ಡಾಯವಾಗಿರುತ್ತದೆ. ಒಂದಕ್ಕಿಂತಲೂ ಹೆಚ್ಚಿನ ಸಾಲಿನ ಆಸ್ತಿತರಿಗೆ ಪಾವತಿಸದೇ ಇರುವ ಪ್ರಕರಣಗಳಲ್ಲಿ ಆಸ್ತಿತೆರಿಗೆ ವಸೂಲಿ ಮಾಡುವ ಕಾರ್ಯವಿಧಾನವನ್ನು ಆಸ್ತಿತೆರಿಗೆ ನಿರ್ಧರಣೆ, ವಸೂಲಾತಿ ಮತ್ತು ನಿರ್ವಹಣೆ ನಿಯಮಗಳು 2024ರ ಅಡಿಯಲ್ಲಿ ರೂಪಿಸಲಾಗಿರುತ್ತದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಹಾಗೂ ನಿಯಮಗಳಲ್ಲಿ ತಿಳಿಸಿರುವಂತೆ ಆಸ್ತಿ ತೆರಿಗೆ ಸುಸ್ಥಿದಾರರಿಗೆ ಕಾರಣ ಕೇಳಿ ಪತ್ರ, ಆಸ್ತಿ ತೆರಿಗೆ ಬೇಡಿಕೆ ಪತ್ರ ಜಾರಿ ಮಾಡಲಾಗಿದ್ದು, ಸಾಕಷ್ಟು ಕಾಲಾವಕಾಶವನ್ನು ನೀಡಿದ್ದರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುತ್ತಾರೆ. ಅಂತಹ ಪ್ರಕರಣಗಳ ಮಾಲೀಕರಿಗೆ ನಿಯತಕಾಲಿಕವಾಗಿ ಮೊಬೈಲ್ ಸಂದೇಶಗಳ ಮೂಲಕ ಸ್ವತ್ತಿನ ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸುವಂತೆ ಹಲವ ಬಾರಿ ತಿಳಿಸಲಾಗಿರುತ್ತದೆ ಎಂದು ಜಂಟಿ ಆಯುಕ್ತರು ತಿಳಿಸಿದರು.
ಮುಂದುವರೆದು ಸಾಕಷ್ಟು ಅವಕಾಶಗಳನ್ನು ನೀಡಿದ ನಂತರವು ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸದ ಕೆ.ಆರ್ ಪುರ ವಲಯ ವ್ಯಾಪ್ತಿಯಲ್ಲಿನ 33 ಸ್ವತ್ತುಗಳನ್ನು ಕಾಯ್ದೆ ಹಾಗೂ ನಿಯಮಗಳನ್ವಯ ಹರಾಜು ಪ್ರಕ್ರಿಯೆಗೆ (Distress sale) ಒಳಪಡಿಸಲು ತಿರ್ಮಾನಿಸಲಾಗಿರುತ್ತದೆ ಎಂದು ಜಂಟಿ ಆಯುಕ್ತರು ತಿಳಿಸಿದರು.
ಆಸ್ತಿ ತೆರಿಗೆ ಸುಸ್ತಿದಾರರೆಂದು ಗುರುತಿಸಲಾಗಿರುವ ಸ್ವತ್ತುಗಳಿಂದ ಹರಾಜಿನ ಮೂಲಕ ಬೇಬಾಕಿ ಆಸ್ತಿ ತೆರಿಗೆ ವಸೂಲಾತಿ ಮಾಡುವ ಮುಂದುವರೆದ ಕ್ರಮವಾಗಿ ಇದೇ ಫೆಬ್ರವರಿ 21ರಂದು ಬೆಳಗ್ಗೆ 11-00 ಗಂಟೆಗೆ ಜಂಟಿ ಆಯುಕ್ತರ ಕಾರ್ಯಾಲಯ ಕೆ.ಆರ್.ಪುರ ವಲಯ-2ರ ಕಛೇರಿಯ ಮುಂಭಾಗದಲ್ಲಿ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುವುದು ಸಾರ್ಜಜನಿಕರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಈ ಮೂಲಕ ಕೋರಿದೆ ಎಂದು ಜಂಟಿ ಆಯುಕ್ತರು ತಿಳಿಸಿದರು.
ಸುಸ್ಥಿದಾರ ಸ್ವತ್ತಿನ ಮಾಲೀಕರು ಹರಾಜು ಪ್ರಕ್ರಿಯೆಯ ಮುನ್ನಾ ಸ್ವತ್ತಿನ ಬಾಕಿ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸಿದ್ದಲ್ಲಿ ಹರಾಜು ಪ್ರಕ್ರಿಯೆಯಿಂದ ಸ್ವತ್ತನ್ನು ಕೈ ಬಿಡಲಾಗುವುದು, ಅಂತಹ ಸಂದರ್ಭದಲ್ಲಿ ಸ್ವತ್ತಿನ ಹರಾಜು ಪ್ರಕ್ರಿಯೆಗೆ ಮುನ್ನಾ ತಮ್ಮ ಅಹವಾಲುಗಳನ್ನು ಜಂಟಿ ಆಯುಕ್ತರ ಕಛೇರಿಗೆ ಸಲ್ಲಿಸಲು ಅವಕಾಶವಿರುತ್ತದೆ ಎಂದು ಜಂಟಿ ಆಯುಕ್ತರು ಈ ಸಂದರ್ಭದಲ್ಲಿ ತಿಳಿಸಿದರು.








