ಬೆಂಗಳೂರು: ಇಂದು ವಿಧಾನ ಪರಿಷತ್‌ನಲ್ಲಿ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ಅವರು, ವಿ.ಪರಿಷತ್ ಸದಸ್ಯರಾದ ಶ್ರೀ ಎಂ. ನಾಗರಾಜು ಅವರ ಪ್ರಶ್ನೆಗೆ ಉತ್ತರ ನೀಡಿದರು. ರಾಜ್ಯದಲ್ಲಿ ಹಲವು ವರ್ಷಗಳಿಂದ ಇದ್ದ ತಾಂತ್ರಿಕ ದೋಷವನ್ನು ನಿವಾರಣೆ ಮಾಡಿರುವುದರಿಂದ ಪಡಿತರ ವಿತರಣೆಯಲ್ಲಿ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು. ಕಪ್ಪು ಮಾರುಕಟ್ಟೆಯಲ್ಲಿ ಸರಕುಗಳ ಮಾರಾಟ ಮತ್ತು ಇತರ ಚಟುವಟಿಕೆಗಳ ಬಗ್ಗೆ 409 ಪ್ರಕರಣಗಳು ದಾಖಲಾಗಿದ್ದು, ₹20 ಕೋಟಿಗೂ ಹೆಚ್ಚು ದಂಡ ವಿಧಿಸಲಾಗಿದೆ ಹಾಗೂ ಈಗಾಗಲೇ ₹10 ಕೋಟಿ ವಸೂಲಿ ಮಾಡಲಾಗಿದೆ ಎಂದು ಹೇಳಿದರು.
ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಬಿಪಿಎಲ್ ಕಾರ್ಡ್‌ಗಳು ಇರುವ ರಾಜ್ಯ ನಮ್ಮದು ಎಂದು ಸಚಿವರು ತಿಳಿಸಿ, ನಮ್ಮ ರಾಜ್ಯದಲ್ಲಿ ಶೇಕಡಾ 75 ರಿಂದ 80ರಷ್ಟು ಬಿಪಿಎಲ್ ಕಾರ್ಡ್‌ಗಳು ಇದ್ದು, ತಮಿಳುನಾಡಿನಲ್ಲಿ 50%, ಕೇರಳದಲ್ಲಿ 45% ಮತ್ತು ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ 50% ಬಿಪಿಎಲ್ ಕಾರ್ಡ್‌ಗಳಿವೆ ಎಂದರು. ಕಳೆದ ವಿಧಾನಸಭಾ ಅಧಿವೇಶನದ ಹಿಂದೆ 15 ಲಕ್ಷ ಕಾರ್ಡ್‌ಗಳನ್ನು ಪರಿಶೀಲನೆಗೆ ತೆಗೆದುಕೊಂಡಾಗ, ಸುಮಾರು 50 ರಿಂದ 60 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಿದ್ದೇವೆ, ಆದರೆ ಕೆಲವರ ಗೊಂದಲ ಸೃಷ್ಟಿಯಿಂದ ಆ ಕೆಲಸ ನಿಂತುಹೋಯಿತು ಎಂದು ಸಚಿವರು ವಿಷಾದ ವ್ಯಕ್ತಪಡಿಸಿದರು.
ಪರಿಷ್ಕರಣೆ ಕಾರ್ಯಕ್ಕಾಗಿ ಕೇಂದ್ರದ 12 ಮಾನದಂಡಗಳು ಮತ್ತು ರಾಜ್ಯದ 5 ಮಾನದಂಡಗಳ ಆಧಾರದ ಮೇಲೆ ಮುಂದಾಗಿರುವುದಾಗಿ ತಿಳಿಸಿ, ಎಲ್ಲಾ ಸದಸ್ಯರು ಸಹಕರಿಸಬೇಕೆಂದು ಮನವಿ ಮಾಡಿದರು. ಅನರ್ಹರನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾಯಿಸಿ ನಿಜವಾದ ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ಒದಗಿಸುವುದು ನಮ್ಮ ಉದ್ದೇಶ ಎಂದು ಸಚಿವರು ಸ್ಪಷ್ಟಪಡಿಸಿದರು.