ಕಾರವಾರ: ರಾಜ್ಯ ಸರ್ಕಾರವು ಅನರ್ಹ ಮಾಸಾಶನ ಫಲಾನುಭವಿಗಳಿಗೆ ಬಿಗ್ ಶಾಕ್ ನೀಡಿದ್ದು, ಸುಳ್ಳು ಮಾಹಿತಿ ನೀಡಿ ಪಿಂಚಣಿ ಪಡೆಯುತ್ತಿರುವ 11.80 ಲಕ್ಷ ಜನರಿಗೆ ಪಿಂಚಣಿ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ರಾಜ್ಯದಲ್ಲಿ 11.80 ಲಕ್ಷಕ್ಕೂ ಅಧಿಕ ಜನರು ವಿವಿಧ ಯೋಜನೆಗಳಡಿ ಅನಧಿಕೃತವಾಗಿ ಮಾಸಾಶನ ಪಡೆಯುತ್ತಿರುವ ಅನುಮಾನವಿದ್ದು, ಈ ಬಗ್ಗೆ ಪರಿಶೀಲನೆಗೆ ಶೀಘ್ರವೇ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು 60 ವಯಸ್ಸಿಗಿಂತ ಕಡಿಮೆ ಇರುವ ಲಕ್ಷಾಂತರ ಜನ ವೃದ್ಧಾಪ್ಯ ವೇತನ ಪಡೆಯುತ್ತಿರುವ ಮಾಹಿತಿ ಆಧಾರ್ ಸೀಡಿಂಗ್ನಿಂದ ಕಂಡುಬಂದಿದೆ ಎಂದು ಹೇಳಿದ್ದಾರೆ.
ಸರ್ಕಾರಿ ನೌಕರರ ಎಚ್ಆರ್ಎಂಎಸ್ನಲ್ಲಿ ನೋಂದಣಿಯಾಗಿರುವ 117 ಜನ, ಆದಾಯ ತೆರಿಗೆ ಪಾವತಿ ಮಾಡುವ 13,702 ಜನ, ಎಪಿಎಂಎಲ್ ಕಾರ್ಡ್ ಹೊಂದಿರುವವರು ವಿವಿಧ ಪಿಂಚಣಿ ಸೌಲಭ್ಯ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅಂಗವೈಕಲ್ಯ ಇಲ್ಲದವರೂ ವೈದ್ಯರ ನಕಲಿ ಪ್ರಮಾಣಪತ್ರ ಪಡೆದು ಪಿಂಚಣಿ ಪಡೆಯುತ್ತಿರುವುದನ್ನು ಗ್ರಾಮ ಆಡಳಿತ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿದ್ದೇವೆ ಎಂದು ತಿಳಿಸಿದ್ದಾರೆ.