ಬೆಂಗಳೂರು: ವಿಧಾನಮಂಡಲ ಅಧಿವೇಶನ ಮುಗಿದ ಕೂಡಲೇ ಅನರ್ಹ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸುವುದಾಗಿ ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಪ್ರತಾಪ ಸಿಂಹ ನಾಯಕ್, ಕಾಂಗ್ರೆಸ್ ನ ಯತೀಂದ್ರ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಧಿವೇಶನ ಮುಗಿದ ನಂತರ ಬಿಪಿಎಲ್ ಪಡಿತರ ಚೀಟಿ ಪಡೆದಿರುವ ಅನರ್ಹರನ್ನು ಪತ್ತೆ ಮಾಡಿ ಎಪಿಎಲ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗುವುದು, ಅನರ್ಹ ಪಡಿತರ ಚೀಟಿ ರದ್ದತಿ ನಂತರ ಹೊಸ ಪಡಿತರ ಚೀಟಿ ನೀಡಲಾಗುವುದು ಎಂದು ತಿಳಿಸಿದರು.
ಈ ಹಿಂದೆ 15 ಲಕ್ಷ ಅನರ್ಹ ಪಡಿತರ ಚೀಟಿ ರದ್ದು ಮಾಡಲು ಮುಂದಾದಾಗ ಗೊಂದಲ ಉಂಟಾಗಿದ್ದರಿಂದ ಪಡಿತರ ಚೀಟಿ ರದ್ದು ಪ್ರಕ್ರಿಯೆ ನಿಲ್ಲಿಸಬೇಕಾಯಿತು ಎಂದು. ಆದರೆ ಎಲ್ಲ ಜನಪ್ರತಿ ನಿಧಿಗಳ ಸಹಕಾರದಿಂದ ಅನರ್ಹ ಪಡಿತರ ಚೀಟಿ ರದ್ದುಗೊಳಿಸಲಾಗುವುದು ಎಂದರು. ಎಪಿಎಲ್ ಕಾರ್ಡ್ ನೀಡಿಕೆ ಸಹ ನಿಲ್ಲಿಸಲಾಗಿದೆ. ಸುಮಾರು ಒಂದು ಲಕ್ಷ ಪಡಿತರ ಚೀಟಿ ದಾರರು ಪಡಿತರ ತೆಗೆದುಕೊಳ್ಳದ ಕಾರಣ ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
1.28 ಕೋಟಿ ಕಾರ್ಡ್ ಗೆ ಅಕ್ಕಿ ನೀಡಲಾಗುತ್ತಿದೆ. 3.27 ಲಕ್ಷ ಬಿಪಿಎಲ್ ಕಾರ್ಡ್ ಕೊಡುವುದು ಬಾಕಿ ಇದೆ. ಎಪಿಎಲ್ ಗೆ ಅರ್ಹತೆ ಇರುವವರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದು, ಅಧಿವೇಶನದ ಬಳಿಕ ಪರಿಷ್ಕರಣೆ ಆರಂಭಿಸಲಾಗುವುದು. ಅನರ್ಹ ಬಿಪಿಎಲ್ ಕಾರ್ಡುಗಳನ್ನು ಪರಿಷ್ಕರಿಸಿ ಅಂತಹ ಕಾಡುಗಳನ್ನು ರದ್ದು ಮಾಡಲಾಗುವುದು. ಅರ್ಜಿ ಹಾಕಿರುವ ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲಾಗುವುದು ಎಂದು ತಿಳಿಸಿದ್ದಾರೆ.