ನವದೆಹಲಿ: ದೇಶದ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಯಾವುದೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಲೋಕಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸಾಲಮನ್ನಾ ಮಾಡುವ ಬದಲು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸರ್ಕಾರ ಹಲವು ಪರ್ಯಾಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಕಿಸಾನ್ ಕ್ರೆಡಿಟ್ ಕಾರ್ಡ್ (KCC): ರೈತರಿಗೆ ಸಕಾಲದಲ್ಲಿ ಮತ್ತು ಸಮರ್ಪಕವಾಗಿ ಸಾಲ ಸೌಲಭ್ಯ ಒದಗಿಸಲು ‘ಕಿಸಾನ್ ಕ್ರೆಡಿಟ್ ಕಾರ್ಡ್’ ಯೋಜನೆಯನ್ನು ಬಲಪಡಿಸಲಾಗಿದೆ.
ಬಡ್ಡಿ ರಿಯಾಯಿತಿ: ಪರಿಷ್ಕೃತ ಬಡ್ಡಿ ರಿಯಾಯಿತಿ ಯೋಜನೆ ಅಡಿಯಲ್ಲಿ, 3 ಲಕ್ಷ ರೂಪಾಯಿಗಳವರೆಗಿನ ಬೆಳೆ ಸಾಲವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿಸುವ ರೈತರಿಗೆ ಹೆಚ್ಚಿನ ಪ್ರೋತ್ಸಾಹಧನವನ್ನೂ ನೀಡಲಾಗುತ್ತಿದೆ.
ಸೆಕ್ಯೂರಿಟಿ ರಹಿತ ಸಾಲದ ಮಿತಿ ಏರಿಕೆ: ಅಲ್ಪಾವಧಿ ಕೃಷಿ ಸಾಲಗಳ ಮೇಲಿನ ಸೆಕ್ಯೂರಿಟಿ ರಹಿತ ಸಾಲದ ಮಿತಿಯನ್ನು 1.6 ಲಕ್ಷ ರೂಪಾಯಿಗಳಿಂದ 2 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಆದ್ಯತಾ ವಲಯದ ಸಾಲ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿಗಳ ಅನ್ವಯ ಕೃಷಿ ಸೇರಿದಂತೆ ಹಲವು ಆದ್ಯತಾ ವಲಯಗಳಿಗೆ ಸುಲಭವಾಗಿ ಸಾಲ ಸಿಗುವಂತೆ ಕ್ರಮ ವಹಿಸಲಾಗಿದೆ.
ಯೋಧರ ಪಿಂಚಣಿಗೆ ಆದಾಯ ತೆರಿಗೆ ವಿನಾಯಿತಿ: ಸೇವೆಯಲ್ಲಿದ್ದಾಗ ಅಂಗವೈಕಲ್ಯಕ್ಕೊಳಗಾಗಿ ನಿವೃತ್ತರಾದ ಯೋಧರಿಗೆ ನೀಡಲಾಗುವ ಪಿಂಚಣಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡುವ ನಿಯಮ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದರು.








