ಬೆಂಗಳೂರು : ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ಎದುರಾಗಿದ್ದು, ಬೆಳ್ಳುಳ್ಳಿ ಹಾಗೂ ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಬೆಳ್ಳುಳ್ಳಿ ದರ ಕೆಜಿಗೆ 400 ರೂ. ಗಡಿ ದಾಟಿದ್ರೆ, ಟೊಮೆಟೊ ದರ ಕೆಜಿಗೆ 80 ರೂ.ಗೆ ಮಾರಾಟವಾಗುತ್ತಿದೆ.
ದೇಶದ ಒಟ್ಟು ಬೆಳ್ಳುಳ್ಳಿ ಉತ್ಪಾದನೆಯಲ್ಲಿ ಮಧ್ಯಪ್ರದೇಶ ಶೇಕಡ 70ರಷ್ಟು ಪಾಲು ಹೊಂದಿದೆ. ಮಧ್ಯಪ್ರದೇಶದಿಂದ ಆವಕ ಇಳಿಕೆಯಾಗಿರುವುದರಿಂದ ಬೆಳ್ಳುಳ್ಳಿ ಬೆಲೆ 400 ರ ಗಡಿ ದಾಟಿದೆ. ರಾಜ್ಯದಲ್ಲಿ ಮಳೆಯಿಂದ ಬೆಳ್ಳುಳ್ಳಿ ಬೆಳೆ ಹಾಳಾಗಿದ್ದು, ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ನವೆಂಬರ್ ವೇಳೆಗೆ ಬೆಳ್ಳುಳ್ಳಿ ದರ ಮತ್ತಷ್ಟು ಏರಿಕೆಯಾಗಲಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಲಿದೆ. ಕಳೆದ ಫೆಬ್ರವರಿಯಲ್ಲಿ ಬೆಳ್ಳುಳ್ಳಿ ದರ 500 ರೂ. ಸಮೀಪಿಸಿತ್ತು. ಈಗ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ದರ್ಜೆಯ ಬೆಳ್ಳುಳ್ಳಿ ದರ 360 ರಿಂದ 370 ರೂ.ಗೆ ಮಾರಾಟವಾಗುತ್ತಿದೆ. ಕೆಲವು ಕಡೆ ಕೆಜಿಗೆ 400 ರೂ. ತಲುಪಿದೆ. ಕೇಂದ್ರ ಸರ್ಕಾರ ದೇಶದ ರೈತರ ಹಿತ ದೃಷ್ಟಿಯಿಂದ ಬೆಳ್ಳುಳ್ಳಿ ಮೇಲಿನ ಆಮದು ಸುಂಕವನ್ನು 100ರಷ್ಟು ಹೆಚ್ಚಿಸಿದೆ.
ಟೊಮೆಟೊ ದರ ಕೂಡ ಏರಿಕೆ ಕಂಡಿದ್ದು, ಭಾರಿ ಮಳೆಯಿಂದ ಗುಣಮಟ್ಟದ ಈರುಳ್ಳಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ ದರ 52 ರೂ. ದಾಟಿದ್ದು, ಸೂಪರ್ ಮಾರ್ಕೆಟ್ ಗಳಲ್ಲಿ 80 ರೂ.ಗೆ ಮಾರಾಟ ಮಾಡಲಾಗುತ್ತಿದೆ.