ಬೆಂಗಳೂರು : ಹೋಟೆಲ್ ಗ್ರಾಹಕರಿಗೆ ದೀಪಾವಳಿ ಬಳಿಕ ಶಾಕ್ ಎದುರಾಗಲಿದ್ದು, ಕಾಫಿ, ಚಹಾ ದರ 2 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಭಾರತೀಯ ಕಾಫಿ ವ್ಯಾಪಾರಿ ಸಂಘ (ಐಸಿಟಿಎ) ಕೇಜಿ ಕಾಫಿ ಪುಡಿಗೆ 100 ರೂ. ವರೆಗೆ ಹೆಚ್ಚಿಸುತ್ತಿರುವುದು ಹಾಗೂ ಟೀ ಪುಡಿಯ ದರ ಸಹ ಹೆಚ್ಚಾಗಿರು ವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಚಹಾ-ಕಾಫಿ ಬೆಲೆ ಹೆಚ್ಚಳ, ಸಿಲಿಂಡರ್ ದರ, ಹಾಲಿನ ದರ ಹೆಚ್ಚಳದ ಪರಿಣಾಮ ಕಾಫಿ, ಟೀ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದ್ದು, ಬೆಂಗಳೂರು ನಗರದಲ್ಲಿ ಕಾಫಿ-ಚಹಾಕ್ಕೆ 15- 35 ರೂ. (ಸಾಮಾನ್ಯ ಹೊಟೆಲ್) ಇದ್ದು, ಐಷಾರಾಮಿ ಹೊಟೆಲ್, ಕೆಫೆಗಳಲ್ಲಿ ದರ 100 ರೂ. ಮೇಲಿದೆ. ಸಾಮಾನ್ಯ ಹೊಟೆಲ್‌ಗಳಲ್ಲಿ 2ವರೆಗೆ ಬೆಲೆ ಹೆಚ್ಚಿಸಲು ಚಿಂತನೆ ನಡೆದಿದೆ.
ಜನವರಿಯಲ್ಲಿ ಚಿಕೋರಿ ಮಿಶ್ರಿತ ಕಾಫಿ ಪುಡಿಗೆ ಕೇಜಿಗೆ 200- 250 ರೂ. ಇತ್ತು. ಆದರೆ ಇದೀಗ ಕಾಫಿ ಪುಡಿ ಬೆಲೆ ದುಪ್ಪಟ್ಟು ಏರಿಕೆಯಾಗಿದೆ. ರೊಬುಸ್ಟಾ ಕಾಫಿ ಪುಡಿ ಬೆಲೆ ಒಂದು ಕೇಜಿಗೆ 200ರಿಂದ 420 ರೂ.ರವರೆಗೆ ಹಾಗೂ ಅರೇಬಿಕಾ ಕಾಫಿ ಪುಡಿಯಲ್ಲಿ ಕೇಜಿಗೆ 290ರಿಂದ 465 ರೂ. ವರೆಗೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕಾಫಿ, ಟೀ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.